

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಹೊಸಮಠದ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಜಾತ್ರಾ ಮಹೋತ್ಸವ ಹಾಗೂ 103ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಮಹಾ ರಥೋತ್ಸವ ಏಪ್ರಿಲ್ 9ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಸಿದ್ದೇಶ್ವರ ಸ್ವಾಮಿಗಳ ಹೊಸಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಹಾಜಾಗರಣೆ ಭಜನೆ, ಸಿದ್ದೇಶ್ವರ ಸ್ವಾಮೀಜಿಗೆ ಮಹಾರುದ್ರಾಭಿಷೇಕದೊಂದಿಗೆ ಶಿವನಾಮ ಸಪ್ತಾಹ ಪ್ರಾರಂಭವಾಗಿದೆ. ಹುಕ್ಕೇರಿ ತಾಲೂಕಿನ ಬಸವಬೆಳವಿಯ ಚರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವ ದೇವರು ನಿತ್ಯ ಸಂಜೆ 7ಕ್ಕೆ ಪ್ರವಚನ ನೀಡುತ್ತಿದ್ದಾರೆ. ಏಪ್ರಿಲ್ 8ರ ವರೆಗೆ ಪ್ರವಚನ ನಡೆಯಲಿದೆ ಎಂದರು.
ಏ. 9ರಂದು ಬೆಳಗ್ಗೆ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿವೆ. ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಏ. 10ರಿಂದ 13ರ ವರೆಗೆ ಸಂಜೆ 4ಕ್ಕೆ ಬಯಲು ಕುಸ್ತಿ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ನೂತನ ಕಟ್ಟಡ: ಶ್ರೀಮಠದ ನೂತನ ಶಿಲಾ ಕಟ್ಟಡವನ್ನು ನಿಮಿರ್ಸಲು ಸಂಕಲ್ಪ ಮಾಡಲಾಗಿದೆ. ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನೆರವೇರಿಸಿದ್ದಾರೆ. ಸುಂದರ ಕೆತ್ತನೆಯ ಶಿಲಾ ದೇವಾಲಯ ಶ್ರೀ ನಿರ್ಮಾಣವಾಗಲಿದೆ ಎಂದು ರಾಜಣ್ಣ ತಿಳಿಸಿದರು.