

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಉಣಕಲ್ಲ್ ಕ್ರಾಸ್ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವ ಮಾ. 9ರಂದು ಸಂಜೆ 5.30 ಗಂಟೆಗೆ ಜರುಗಲಿದೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾತ್ರಿ ಜಾತ್ರಾ ಮಹೋತ್ಸವ ಮಾ. 3ರಿಂದ ಆರಂಭಗೊಳ್ಳಲಿದೆ. 3ರಿಂದ 8ರವರೆಗೆ ನಿತ್ಯ ಸಂಜೆ 7 ಗಂಟೆಗೆ ಕಾಶಿ ಶಾಖಾಮಠದ ಶ್ರೀ ರಾಜಶೇಖರ ಶಿವಾಚಾರ್ಯರು ಪ್ರವಚನ ನೀಡುವರು. ಅದಕ್ಕೂ ಪೂರ್ವ ಸಂಜೆ 6ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಹಾಶಿವರಾತ್ರಿ ಜಾಗರಣೆ ನಿಮಿತ್ತ 8ರಂದು ರಾತ್ರಿ 10 ಗಂಟೆಯಿಂದ ಭಜನಾ ಕಾರ್ಯಕ್ರಮ, 9ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಪಾಲಕಿ ಉತ್ಸವ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ಸಂಜೆ 5.30 ಗಂಟೆಗೆ ಸಕಲ ವಾದ್ಯವೃಂದದೊಂದಿಗೆ ಮಹಾ ರಥೋತ್ಸವ ಜರುಗುವುದು ಎಂದರು.
ರಾಮಲಿಂಗೇಶ್ವರ ದೇವಸ್ಥಾನವು ಬಿಆರ್ಟಿಎಸ್ನವರ ಸ್ವಾಧೀನದಲ್ಲಿದೆ. ಪಕ್ಕದ 10 ಗುಂಟೆ ಸಿಎ ನಿವೇಶನವನ್ನು ಖರೀದಿ ಮಾಡಿದ್ದೇವೆ. ಅಲ್ಲಿಯೇ ಎಲ್ ಆಕಾರದಲ್ಲಿರುವ 7 ಗುಂಟೆ ಜಾಗ ನೀಡುವಂತೆ ಹುಡಾಗೆ ಮನವಿ ಮಾಡಿದ್ದೇವೆ. ಹುಡಾ ದವರು ಜಾಗ ಮಂಜೂರು ಮಾಡಿದ ಬಳಿಕ ಬಿಆರ್ಟಿಎಸ್ನವರ ಸ್ವಾಧೀನದಲ್ಲಿರುವ ದೇವಸ್ಥಾನದ ರಾಮಲಿಂಗೇಶ್ವರ ದೇವರ ಉದ್ಭವ ಮೂರ್ತಿಯನ್ನು ಸ್ಥಳಾಂತರಿಸಿ, ಹೊಸ ದೇವಸ್ಥಾನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರುಪಾಕ್ಷಿ ಕಳ್ಳಿಮನಿ, ಮಂಜುನಾಥ ಕಿರೇಸೂರ, ಷಣ್ಮುಖ ಹೆಬ್ಬಳ್ಳಿ, ರಂಗನಾಥ ಚಿಕ್ಕನಗೌಡ್ರ ಇದ್ದರು.