‘ಅನ್ಯಾಯಕಾರಿ ಬ್ರಹ್ಮ’ ಹೆಸರು ಬಂತು, ಹಣ ಬರಲಿಲ್ಲ!

mysore
Published on

ಮೈಸೂರು:
‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ’ ಎಂಬ ಅರ್ಜುನನ ಜೋಗಿ ಹಾಡು ಈಗ ಹೆಸರು ತಂದುಕೊಟ್ಟಿತ್ತು. ಆದರೆ, ಹಣ ಬರಲಿಲ್ಲ ಎಂದು ಹಿರಿಯ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಹೇಳಿದರು.


ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಗಂಗೂಬಾಯಿ ಹಾನಗಲ್ ಅವರ 111ನೇ ಜನ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


27 ವರ್ಷಗಳ ಹಿಂದೆ ಹಾಡಿದ್ದ ಅರ್ಜುನನ ಜೋಗಿ ಹಾಡು ಈಗ ಹೆಸರುವಾಸಿಯಾಗಿದೆ. ಈ ಹಾಡಿಗೆ ಮೈಸೂರಿನಲ್ಲಿ ಓದುತ್ತಿರುವ ಚಿತ್ರದುರ್ಗದ ಹಿರಿಯೂರಿನ ವಿದ್ಯಾರ್ಥಿನಿ ಮಾಡಿದ ನೃತ್ಯವನ್ನು ಫೇಸ್‌ಬುಕ್‌ನಲ್ಲಿ ಹಾಕಿದಾಗ ಜಗತ್ತು ನೋಡಿತು. ಅದು ವೈರಲ್ ಆಯಿತು. ಈ ಹಾಡು ಬಳಸಿಕೊಂಡು ಎಲ್ಲರೂ ದುಡ್ಡು ಮಾಡಿಕೊಂಡರು. ನನಗೆ ಮಾತ್ರ ಹೆಸರು ಬಂತು. ಆದರೆ, ದುಡ್ಡು ಬರಲಿಲ್ಲ ಎಂದು ಹೇಳಿ ಅರ್ಜುನನ ಜೋಗಿ ಹಾಡನ್ನು ಹಾಡಿ ರಂಜಿಸಿದರು.

ಮಾತು ಮುಂದುವರಿಸಿದ ಅವರು, ಈವರೆಗೆ ಆಲಂಬಾಡಿ ಜುಂಜೇಗೌಡ 20 ಕತೆಗಳನ್ನು ಹೇಳಿದ್ದು, ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಮಲೆ ಮಹದೇಶ್ವರಸ್ವಾಮಿಗೆ ದೇವಸ್ಥಾನ ಕಟ್ಟಿಸಿದ ಆಲಂಬಾಡಿ ಜುಂಜೇಗೌಡರ ಕತೆಯನ್ನು ಹಾಡಿದ್ದೇನೆ.

ಇನ್ನೂ 20 ಕತೆಗಳನ್ನು ಹಾಡಲಿರುವೆ ಎಂದರು.
ನನಗೆ ಹಾಡುಗಾರಿಕೆ, ಸಿನಿಮಾ, ಹಾರ್ಮೋನಿಯಂ ಗೀಳಿತ್ತು. ನಾನು ಅಕ್ಷರ ಕಲಿಯುವುದಿಲ್ಲ ಎಂದು ಜೋಳಿಗೆ ಹಾಕೊಂಡು ಭಿಕ್ಷೆ ಬೇಡಿದರೆ ರಾಗಿ, ಭತ್ತ ಸಿಗುತ್ತದೆ, ಮಧ್ಯಾಹ್ನ ಯಾರಾದರೂ ಊಟ ಕೊಡುವರೆಂದು ನಮ್ಮ ತಂದೆಯವರು ಕಂಸಾಳೆ ಪದ ಕಲಿಕೆಗೆ ಸೇರಿಸಿದರು. ತುಂಬ ಬಡತನದಲ್ಲಿ ಬೆಳೆದವು. ಜಾನಪದ ಕಲೆ ನಮ್ಮನ್ನು ಕೈ ಹಿಡಿಯಿತು ಎಂದರು.


ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಮಾತನಾಡಿ, ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮುಡಾಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಯುತವಾಗಿ ಬರಬೇಕಾದ್ದು ಬರುವುದರಲ್ಲಿಯೇ ಇದೆ. ಈಗ ಅಧ್ಯಕ್ಷರಾಗಿರುವ ಕೆ.ಮರೀಗೌಡರು ನಿವೇಶನ ಕೊಡಿಸುವ ಭರವಸೆ ಇದೆ ಎಂದರು.


ಮುಡಾ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿ, ಸಂಗೀತ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತವಾದ ಸ್ಥಳ ಗುರುತಿಸಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.


ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರಸನ್ನ ಇತರರಿದ್ದರು.

ಸಾಂಸ್ಕೃತಿಕ ಉತ್ಸವ ಆಯೋಜನೆ


ಗಂಗಜ್ಜಿ ಜನ್ಮದಿನವನ್ನು ಸಾಂಸ್ಕೃತಿಕ ಉತ್ಸವದೊಂದಿಗೆ ಆಚರಿಸಲಾಯಿತು. ಸಂಗೀತ, ನೃತ್ಯ ಪ್ರದರ್ಶನದೊಂದಿಗೆ ಹಿರಿಯ ಚೇತನಕ್ಕೆ ಗೌರವ ಅರ್ಪಿಸಲಾಯಿತು. ಮೈಸೂರು ಅಂಚೆ ಇಲಾಖೆ ರೂಪಿಸಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಡೊಳ್ಳು ಕುಣಿತ, ನಗಾರಿ, ಪೂಜಾ ಕುಣಿತ ಕಲಾ ತಂಡಗಳ ಮೆರವಣಿಗೆಗೆ ನಡೆಯಿತು. ಕಲಾತಂಡಗಳ ಮೆರವಣಿ ಬಲ್ಲಾಳ್ ವೃತ್ತ, ಆರ್‌ಟಿಒ ವೃತ್ತ ಮತ್ತು ರಾಮಸ್ವಾಮಿ ವೃತ್ತಗಳಲ್ಲಿ ಸಾಗಿತು. ಮಧ್ಯಾಹ್ನ ಸಂಗೀತ ಕಛೇರಿ ಆಯೋಜಿಸಲಾಗಿತ್ತು.


ಜಾನಪದ, ಶಾಸ್ತ್ರೀಯ ಕಲೆ ಎಲ್ಲರಿಗೂ ದಕ್ಕುವುದಿಲ್ಲ. ಅದು ದೈವದತ್ತವಾದದ್ದು. ಸಮಯವನ್ನು ಜಾಗ್ರತೆಯಿಂದ ಬಳಸಿದರೆ, ಶ್ರದ್ಧೆ, ಆಸಕ್ತಿ ಇದ್ದರೆ ಗುರಿ ಸಾಧಿಸಬಹುದು.
-ಡಾ.ಮಳವಳ್ಳಿ ಮಹದೇವಸ್ವಾಮಿ ಜಾನಪದ ಗಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net