ಪದವಿ ತರಗತಿ ಹಾಗೂ ಪರೀಕ್ಷೆ ಮುಂದೂಡಿದ ಮೈಸೂರು ವಿಶ್ವ ವಿದ್ಯಾಲಯ

mysore university
Published on

ಮೈಸೂರು: ಮೈಸೂರು ವಿಶ್ವ ವಿದ್ಯಾಲಯವು 2022-23ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಯ ತರಗತಿಗಳು ಮತ್ತು ಪರೀಕ್ಷೆಗಳನ್ನು ಮುಂದೂಡಿ ಗುರುವಾರ ಆದೇಶ ಹೊರಡಿಸಿದೆ.

ಸ್ನಾತಕ ಪದವಿಯ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳ ಕೊನೆ ದಿನಾಂಕ 5.8.2023ಕ್ಕೆ ನಿಗದಿಪಡಿಸಲಾಗಿತ್ತು. 2023-24ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರದ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಲು ಸ್ನಾತಕ ಕಾಲೇಜಿನ ಪ್ರಾಂಶುಪಾಲರುಗಳ ಒಪ್ಪಿಗೆ ಪಡೆದು ಈ ಹಿಂದೆ ನಿಗದಿಪಡಿಸಿದ್ದ ತರಗತಿಗಳ ಅವಧಿಯನ್ನು ಕಡಿತಗೊಳಿಸಿ 22.07.2022 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ, ಪರೀಕ್ಷೆಗಳನ್ನು ಜುಲೈ 24 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು.

ಈ ನಡುವೆ ವಿದ್ಯಾರ್ಥಿಗಳು ಜು.17 ಮತ್ತು 20 ರಂದು ಪ್ರತಿಭಟನೆ ನಡೆಸಿ ಪದವಿ ತರಗತಿಗಳ ಕೊನೆಯ ದಿನಾಂಕವನ್ನು 15 ದಿನಗಳ ಕಾಲ ಮುಂದೂಡಲು ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದುವಾರದ ಮಟ್ಟಿಗೆ ಪರೀಕ್ಷೆಯನ್ನು ಮುಂದೂಡಬಹುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವೇಳಾಪಟ್ಟಿ ರಚನಾ ಸಮಿತಿ ಸಭೆಯನ್ನು ಗುರುವಾರ ನಡೆಸಿ ವಿದ್ಯಾರ್ಥಿಗಳ ಬೇಡಿಕೆ ಮತ್ತು ಕುಲಸಚಿವರು (ಪರೀಕ್ಷಾಂಗ) ನೀಡಿದ ಅಭಿಪ್ರಾಯದ ಮೇರೆಗೆ ಸ್ನಾತಕ ಪದವಿ ತರಗತಿ ಹಾಗೂ ಪರೀಕ್ಷೆಗಳನ್ನು ಮುಂದೂಡಲು ತೀರ್ಮಾನಿಸಲಾಯಿತು. ಇದಕ್ಕೆ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನ್‌ಗಳು, ಪ್ರಾಧ್ಯಾಪಕರುಗಳು ಸಮ್ಮತಿ ಸೂಚಿಸಿದ್ದಾರೆ.

ಶೈಕ್ಷಣಿಕ ಚಟುವಟಿಕೆಗಳು ಸುಲಲಿತವಾಗಿ ಜರುಗಬೇಕೆನ್ನುವ ಉದ್ದೇಶದಿಂದ ಈಗಾಗಲೇ ನಿಗದಿಪಡಿಸಿದ್ದ 2, 4 ಮತ್ತು 6ನೇ ಸೆಮಿಸ್ಟರ್‌ಗಳ ತರಗತಿಗಳ ಕೊನೆಯ ದಿನಾಂಕ 22.07.2023ರ ಬದಲು 28.07.2023ಕ್ಕೆ ವಿಸ್ತರಿಸಲು ಹಾಗೂ ಪರೀಕ್ಷೆಗಳ ದಿನಾಂಕವನ್ನು 01.08.2023 ರಿಂದ ಪ್ರಾರಂಭಿಸಿ, 30.08.2023ಕ್ಕೆ ಪೂರ್ಣಗೊಳಿಸಲು ಮತ್ತು 31.08.2023ಕ್ಕೆ 2023-24 ನೇ ಶೈಕ್ಷಣಿಕ ಸಾಲಿನ 1,3 ಮತ್ತು 5ನೇ ಸೆಮಿಸ್ಟರ್ ತರಗತಿಗಳನ್ನ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಕುಲಸಚಿವೆ ವಿ.ಆರ್. ಶೈಲಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net