

ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ಸಸ್ಯಶಾಸ್ತ್ರ ವಿಭಾಗ ವತಿಯಿಂದ ವಿಭಾಗದ ಲೆನ್ನೆಯಸ್ ಸಭಾಂಗಣದಲ್ಲಿ ಶನಿವಾರ ‘ಮೈಸೂರು ವಿಶ್ವ ವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತವಾದ ಗುರಿ ಇಟ್ಟುಕೊಳ್ಳಬೇಕು. ನೀವು ಇಟ್ಟುಕೊಂಡ ಗುರಿ ಸಾಧನೆಯ ಕಡೆಗೆ ಶ್ರಮಿಸಬೇಕು. ಬದುಕನ್ನು ಸಂಕೀರ್ಣಗೊಳಿಸಿ ಕೊಳ್ಳಬೇಡಿ, ಬದುಕನ್ನು ಸರಳವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಘವನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಗುಲ್ಬರ್ಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ. ಮುನಿಯಮ್ಮ, ಪ್ರೊ.ಈ.ಟಿ. ಪುಟ್ಟಯ್ಯ, ಸಂಘದ ಅಧ್ಯಕ್ಷ ಪ್ರೊ.ಕೆ.ಎನ್. ಅಮೃತೇಶ್, ಉಪಾಧ್ಯಕ್ಷ ಪ್ರೊ.ಜಿ.ಆರ್. ಜನಾರ್ದನ, ಕಾರ್ಯದರ್ಶಿ ಪ್ರೊ.ಜಿ.ಆರ್. ಶಿವಮೂರ್ತಿ, ಬಟಾನಿಕಲ್ ಸೊಸೈಟಿ ಕಾರ್ಯದರ್ಶಿ ಪ್ರೊ.ರಾಜ್ ಕುಮಾರ್ ಎಚ್. ಗಾರಂಪಳ್ಳಿ ಇದ್ದರು.