

ರಾಚಯ್ಯ ಸ್ವಾಮಿ ಮಾಚನೂರು ರಾಯಚೂರು
ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಅನುದಾನ ಅಕ್ರಮ ಬಳಕೆ ಸಂಬಂಧಿಸಿ ಕೊನೆಗೂ ವಿವಿ ಆಡಳಿತ ಅಲರ್ಟ್ ಆಗಿದೆ. ಬಾಹ್ಯಪರೀಕ್ಷೆ ನಡೆಸದೆ ಹಣ ಕೊಳ್ಳೆ ಹೊಡೆಯಲಾಗಿದೆ ಎಂಬ ಪ್ರಕರಣದ ತನಿಖೆಗೆ ವಿವಿ ಮುಂದಾಗಿದ್ದು, ಆರು ಜನರ ತನಿಖಾ ತಂಡ ರಚಿಸಿ ಕುಲಪತಿ ಆದೇಶ ಹೊರಡಿಸಿದ್ದಾರೆ.
2022-23ರಲ್ಲಿ ಹಣಕಾಸು ವಿಭಾಗದ ಗಮನಕ್ಕಿಲ್ಲದೆ ವಿವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಲ್ಲದೆ, ಅದರ ಮೂಲಕ ವಿವಿ ಸಂಬಂಧಿತ ಹಣಕಾಸು ವಹಿವಾಟು ನಡೆಸಿದ್ದನ್ನು ವಿಜಯವಾಣಿ ಪತ್ರಿಕೆ ಜೂ.23 ಪತ್ರಿಕೆಯಲ್ಲಿ ‘ರಾಯಚೂರು ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಅಕ್ರಮದ ವಾಸನೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಿತ್ತು. ವರದಿ ಬೆನ್ನಲ್ಲೇ ಜಾಗೃತಗೊಂಡ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ ಅವರು ಹಣಕಾಸು ತನಿಖೆ ನಡೆಸಲು ವಿವಿಯ ಸಿಂಡಿಕೇಟ್‌ನ ಆರು ಸದಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಿ, ಆದೇಶ ಹೊರಡಿಸಿದ್ದಾರೆ.
== ಕೋಟ್ಯಂತರ ರೂಪಾಯಿ ವ್ಯವಹಾರ ==
ರಾಯಚೂರು ವಿವಿಯಲ್ಲಿ 2022-23ರಲ್ಲಿ ಆಗಿನ ಕುಲಸಚಿವ 2022ರ ಜೂ.30ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಯಚೂರು ಶಾಖೆಗೆ ಪತ್ರ ಬರೆದು, ಬಾಹ್ಯ ಪರೀಕ್ಷೆ, ಗುತ್ತಿಗೆದಾರರು, ಸರಬರಾಜುದಾರರು ಮತ್ತಿತರೆ ಕಾರಣಗಳಿಗೆ ಬಳಸಲು ವಿವಿ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದುಕೊಡುವಂತೆ ಕೋರಿದ್ದಾರೆ. ಅದರಂತೆ ಬ್ಯಾಂಕು ಖಾತೆ 049112010000352 ತೆರೆಯಲಾಗಿದೆ. ಇದರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಆಗಿರುವುದು ಗುಮಾನಿ ಮೂಡಿಸಿದೆ. ಅಚ್ಚರಿಯೆಂದರೆ ವಿವಿ ಆಡಳಿತವು 2022-23ರ ಅವಧಿಯಲ್ಲಿ ಯಾವುದೇ ರೀತಿಯ ಬಾಹ್ಯ ಪರೀಕ್ಷೆ, ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಲ್ಲ. ಅದಾಗ್ಯೂ ಹಣವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಿರುವುದು ಅನುಮಾನಗಳಿಗೆ ದಾರಿ ಮಾಡಿಕೊಡುವ ರೀತಿಯಲ್ಲಿದೆ.
== ವರದಿ ಸಲ್ಲಿಸುವಂತೆ ಸೂಚನೆ ==
ರಚನೆಯಾದ ಉಪಸಮಿತಿಯಲ್ಲಿ ಅಧ್ಯಕ್ಷರಾಗಿ ಶ್ರೇಯಾಂಕ್ ಎಚ್.ವಿ., ಡಾ.ನಾಗರತ್ನ ಎಂ. ನಾಯ್ಕ, ಶಿವಣ್ಣ ತಪ್ಪಲದೊಡ್ಡಿ, ಡಿ.ಆರ್.ಚಿನ್ನ , ಜೀಶಾನ್ ಅಖಿಲ್ ಸಿದ್ದಿಖಿ ಹಾಗೂ ಉಪಕುಲಸಚಿವ (ಅಡಳಿತ) ಕೆ.ವೆಂಕಟೇಶ ಇದ್ದಾರೆ. ವಿವಿಯಲ್ಲಿ 2021-22 ರಿಂದ ವಿವಿ ಹೆಸರಿನಲ್ಲಿ ಖಾತೆ ಮೂಲಕ ನಡೆಸಿದ ಹಣಕಾಸಿನ ವ್ಯವಹಾರಗಳ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ ಸೂಚಿಸಿದ್ದಾರೆ.
== ತನಿಖೆ ನಡೆಸಲು ಇವರಿಗೆ ಇದೆಯಾ ಅಧಿಕಾರ ? ==
ವಿವಿಯೇನೋ ಹಣ ವರ್ಗಾವಣೆ ತನಿಖೆಗೆ ಉಪಸಮಿತಿ ರಚಿಸಿದೆ. ಆದರೆ, ಸಮಿತಿಯವರು ಸಿಂಡಿಕೇಟ್ ಸದಸ್ಯರೇ ಆಗಿರುವುದರಿಂದ ಅಕ್ರಮದ ಕುರಿತು ತನಿಖೆ ನಡೆಸದೆ, ಬರೀ ಮೇಲ್ನೋಟಕ್ಕೆ ತನಿಖೆ ಮಾಡಿ ಕೈಬಿಡುವ ಸಾಧ್ಯತೆ ಇದೆಯೆಂದು ಶಿಕ್ಷಣ ಪ್ರೇಮಿಗಳು ಮಾತನಾಡುತ್ತಿದ್ದಾರೆ. ಯಾವುದೇ ವಿವಿಯಲ್ಲಿ ಅಕ್ರಮ ನಡೆದರೆ ಜಿಲ್ಲೆಯ ದಂಡಾಧಿಕಾರಿಗಳು, ಇಲ್ಲವೇ ನ್ಯಾಯಿಕ ದಂಡಾಧಿಕಾರಿಗಳು ತನಿಖೆ ಮಾಡಬೇಕು. ಅಕ್ರಮ ತನಿಖೆ ಮಾಡಲು ಸಿಂಡಿಕೇಟ್ ಸದಸ್ಯರಿಗೆ ಯಾವುದೇ ಅಧಿಕಾರವಿಲ್ಲವೆಂಬ ಮಾತು ಕೇಳಿ ಬರುತ್ತಿದೆ.