

ಮಾಯಕೊಂಡ: ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಪದವಿ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯಗಾರಗಳನ್ನು ಆಯೋಜಿಸಿ ಸಂಶೋಧನಾ ವಿಷಯಗಳ ಕುರಿತು ಸಂಕ್ಷಿಪ್ತ ತಿಳಿವಳಿಕೆ ಮೂಡಿಸುವುದು ಉಪಯುಕ್ತ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ. ರಮೇಶ್ ಅಭಿಮತ ವ್ಯಕ್ತಪಡಿಸಿದರು.
ಮಾಯಕೊಂಡ ಗ್ರಾಮದ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಇಂಟರ್ನಲ್ ಕ್ವಾಲಿಟಿ ಅಶ್ಶೂರೆನ್ಸ್ ಸೆಲ್ (ಐಕ್ಯೂಎಸಿ) ಸಂಸ್ಥೆಯಿಂದ ಆಯೋಜಿಸಿದ್ದ ಸಂಶೋಧನಾ ವಿಧಾನಶಾಸ್ತ್ರ ಎಂಬ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವಿಷಯವಿರಲಿ ಅದನ್ನು ಸಂಶೋಧನಾತ್ಮಕವಾಗಿ ತಿಳಿದುಕೊಳ್ಳುವ ಮನೋಭಾವ ವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹಿಂದಿನ ಅನೇಕರು ಹಲವಾರು ವಿಷಯಗಳ ಕುರಿತು ಆವಿಷ್ಕಾರ ಮಾಡಿ ಯಶಸ್ಸು ಕಂಡಿದ್ದಾರೆ ಎಂದರು.
ಸಂಶೋಧನಾ ಪತ್ರಿಕೆಗಳನ್ನು ತಯಾರಿಸಿರುವ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ದಾವಣಗೆರೆ ವಿಶ್ವವಿದ್ಯಾನಿಲಯ 55 ಸಾವಿರ ಸಂಶೋಧನಾ ಪೇಪರ್ಗಳನ್ನು ಹೊಂದಿದೆ. ಇಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ತಿಳಿಸಿದರು.
ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಡಾ. ಅಶೋಕ್ ಕುಸುಗೂರು ಮಾತನಾಡಿ, ಸಂಶೋಧನಾ ವಿಧಾನಶಾಸ್ತ್ರದಲ್ಲಿ ನಮ್ಮನ್ನು ನಾವು ಮೊದಲು ಕಂಡುಕೊಳ್ಳಬೇಕು. ಗ್ರಾಮೀಣ ಸಮಸ್ಯೆ ಸವಾಲುಗಳನ್ನು ಯುವ ವಿದ್ಯಾರ್ಥಿ ಸಮೂಹ ಗುರುತಿಸಿ ಪರಿಹಾರ ಕಲ್ಪಿಸಬೇಕು ಮತ್ತು ಸಾರ್ವಜನಿಕವಾಗಿ ಸಾಮಾನ್ಯ ವಿಷಯಗಳ ಮೌಲ್ಯ ಮತ್ತು ಗುಣಾತ್ಮಕ ತತ್ವಗಳನ್ನು ಹೊರ ತರಬೇಕು. ಮೊಬೈಲ್ನ ಅತಿಯಾದ ಬಳಕೆಯಿಂದ ಹೊರಬರುವ ಸಂಶೋಧನೆ ಅವಶ್ಯ ಎಂದು ಆಶಿಸಿದರು.
ಪ್ರಾಚಾರ್ಯು ಡಾ.ಎಂ.ಎಲ್. ತ್ರಿವೇಣಿ ಮಾತನಾಡಿ, ಹೋಬಳಿ ಮಟ್ಟದ ಗ್ರಾಮಾಂತರ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಗಾರವನ್ನು ಆಯೋಜಿಸಲು ಅವಕಾಶ ಕಲ್ಪಿಸಿರುವ ವಿವಿಗೆ ಅಭಿನಂದಿಸಿದರು. ದೇಶ-ವಿದೇಶಗಳ ಸಂಶೋಧಕರ ಮತ್ತು ಸಂಶೋಧನೆಗಳ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದ್ದು ಶ್ಲಾಘನೀಯ ಎಂದರು.
ಇತಿಹಾಸ ಪ್ರಾಧ್ಯಾಪಕ ಡಾ.ಜಿ.ಎಸ್.ಸದಾಶಿವ್, ಕಾರ್ಯಗಾರ ಸಂಯೋಜಕ ಡಾ.ಜಿ.ಎಂ.ದಿನೇಶ್ ಮಾತನಾಡಿದರು. ದ್ವಿತೀಯ ಬಿಎ ಅರ್ಥಶಾಸ್ತ್ರದಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.