ರೈತರ ಸರ್ವಾಂಗೀಣ ಅಭಿವೃದ್ಧಿಗೆ ವಿವಿ ಶ್ರಮ

21-02-Shiva-2
ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳವನ್ನು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಉದ್ಘಾಟಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಕುಲಸಚಿವ ಡಾ.ಎಂ.ವೀರನಗೌಡ, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಎಂ.ನೇಮಿಚಂದ್ರಪ್ಪ ಇದ್ದರು.
Published on

ರಾಯಚೂರು: ರೈತರ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸದಾ ಶ್ರಮಿಸುತ್ತಿದ್ದು, ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ವಿಶ್ವವಿದ್ಯಾಲಯದ ಬಾಗಿಲು ಸದಾ ತೆರೆದಿರುತ್ತದೆ ಎಂದು ಕೃಷಿ ವಿಜ್ಞಾನ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದಿಂದ ಮಂಗಳವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಮಾರ್ಗದರ್ಶನ, ಸಲಹೆ ನೀಡಲು ವಿವಿಯ ವಿಜ್ಞಾನಿಗಳು ಯಾವಾಗಲೂ ಕಾರ್ಯೋನ್ಮುಖರಾಗಿರುತ್ತಿದ್ದು, ರೈತರು ವಿಜ್ಞಾನಿಗಳ ಸಲಹೆ ಪಡೆಯಲು ಮುಂದೆ ಬರಬೇಕು. ಜತೆಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಸಿರುಗುಪ್ಪದ ಮುಬಾರಕ್ ಜನರಲ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಟಿ.ಭಾಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ಇಂದು ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದ್ದು, ಕಾಲಕ್ಕೆ ತಕ್ಕಂತೆ ರೈತರು ಬದಲಾಗಬೇಕು. ಹೊಸ ಹೊಸ ಕೃಷಿ ಯಂತ್ರೋಪಕರಣಗಳು ಅವಿಷ್ಕಾರ ನಡೆಯುತ್ತಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಕೃಷಿ ಇಲಾಖೆಯಿಂದ ಕೃಷಿ ಯಂತ್ರಧಾರೆ, ಕೃಷಿ ಹೊಂಡ ನಿರ್ಮಾಣ, ಹನಿ ಮತ್ತು ತುಂತುರು ನೀರಾವರಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಕುಲಸಚಿವ ಡಾ.ಎಂ.ವೀರನಗೌಡ, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಎಂ.ನೇಮಿಚಂದ್ರಪ್ಪ, ಪ್ರಾಧ್ಯಾಪಕರಾದ ಡಾ.ವಿಜಯಕುಮಾರ ಪಲ್ಲೇದ, ಡಾ.ಪಿ.ಎಸ್.ಮಠದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net