

ಮಂಗಳೂರು: ಪೆಲಕಾಯಿ ಗಟ್ಟಿ, ತರಹೇವಾರಿ ಹಲ್ವ, ಹೋಳಿಗೆ, ಸ್ವೀಟ್ ಕಾರ್ನ್, ಗುಲಾಬ್ ಜಾಮೂನ್, ಚಿಕನ್ ಬಿರಿಯಾನಿ, ಚಿಕನ್ ಸುಕ್ಕ…
ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಆವರಣ ಮಂಗಳವಾರ ವೈವಿಧ್ಯಮಯ ಭಕ್ಷೃ, ಸಿಹಿ, ಪಾನೀಯಗಳ ಪರಿಮಳದಿಂದ ತುಂಬಿತ್ತು. ಬಾಣಸಿಗ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂಭ್ರಮ, ಉತ್ಸಾಹಿ ಉಪನ್ಯಾಸಕ ವರ್ಗದ ಸದಸ್ಯರಿಂದ ಕಳೆ ಕಟ್ಟಿತ್ತು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಹಾಗೂ ಬಿಬಿಎ (ಟೂರಿಸಂ ಅಂಡ್ ಟ್ರಾವೆಲ್) ವಿಭಾಗದ ವತಿಯಿಂದ ‘ಬಂಜರ- 2ಕೆ 22’ ಹೆಸರಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸ್ವತಃ ವಿದ್ಯಾರ್ಥಿಗಳೇ ವೆಜ್ ಹಾಗೂ ನಾನ್‌ವೆಜ್ ಅಡುಗೆಗಳನ್ನು ಸಿದ್ದಪಡಿಸಿದ್ದರು.
ಸಾರ್ನೆ ಪಾಯಸ, ಕಲ್ತಪ್ಪ, ಚಿಕ್ಕಿ, ಗಾರಿಗೆ, ಶೀರ, ಮಾಲ್ಪುರಿ, ಜಿಲೇಬಿ, ಪನ್ನೀರ್ ಬಿರಿಯಾನಿ, ಇಡ್ಲಿ ಕುರ್ಮ, ಕೊಟ್ಟಿಗೆ ಕುರ್ಮ, ನೀರು ದೋಸೆ, ಕುರ್ಮ, ಪತ್ರೊಡೆ, ಚಿಕನ್ ಬಿರಿಯಾನಿ, ಚಿಕನ್ ಸುಕ್ಕ, ಕೋರಿ ರೊಟ್ಟಿ, ಯೆಟ್ಟಿ ಪುಂಡಿ, ಚಿಕನ್ ಗ್ರೇವಿ, ಯುಸಿಯಂ ಸ್ಪೆಷಲ್ ಸಹಿತ ಸುಮಾರು 50 ಕ್ಕೂ ಅಧಿಕ ಭಕ್ಷೃ, ಖಾದ್ಯಗಳು ಗಮನ ಸೆಳೆಯಿತು.
ಎಲ್ಲ ಆಹಾರಗಳಿಗೆ ದರ ನಿಗದಿಪಡಿಸಲಾಗಿದ್ದು, ಆಸಕ್ತರು ಟೋಕನ್ ಪಡೆದು ತಮ್ಮ ಇಷ್ಟದ ತಿಂಡಿಗಳನ್ನು ಪಡೆಯಲು ಅವಕಾಶ ಒದಗಿಸಲಾಯಿತು.
ಕಾರ್ಯಕ್ರಮ: ಬಂಟ್ವಾಳ ತಾಲೂಕಿನ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ (ರಂಗೋಲಿ) ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಮೇಶ್ ಕೆ ಮುಖ್ಯ ಅತಿಥಿಯಾಗಿದ್ದರು. ಪ್ರಿನ್ಸಿಪಾಲ್ ಡಾ.ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು.
ಪ್ರವಾಸೋದ್ಯಮ ವಿಭಾಗ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ ಎಂ, ಬಿಬಿಎ ಮುಖ್ಯಸ್ಥ ಡಾ.ಎ ಸಿದ್ಧಿಕ್ ಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀರಾಜ್‌ಸ್ವಾಗತಿಸಿದರು. ಪರಿಣಿತಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಲಿಖಿತಾ ಜಿ.ಎನ್ ಕಾರ್ಯಕ್ರಮ ನಿರೂಪಿಸಿದರು.