

ಮೈಸೂರು: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ವಿಶ್ವ ವಿದ್ಯಾಲಯಗಳಲ್ಲಿ ಕಾಯಂ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚಾಗಬೇಕು, ಕೇವಲ ಅತಿಥಿ ಪ್ರಾಧ್ಯಾಪಕರಿಂದಲೇ ವಿಶ್ವ ವಿದ್ಯಾಲಯವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ.ಜೆ. ಶಶಿಧರ ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಡಿ.ವಿ.ಗೋಪಾಲಪ್ಪ ಅವರಿಗೆ ಅಭಿನಂದನೆ ಹಾಗೂ ಭಾರತದ ಗ್ರಾಮೀಣಾಭಿವೃದ್ಧಿಯ ಚಲನೆಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೋಧಕೇತರ ಸಿಬ್ಬಂದಿಯ ನೇಮಕಾತಿಯಾಗಿದೆ. ಆದರೆ, ಕಾಯಂ ಪ್ರಾಧ್ಯಾಪಕರ ಸಂಖ್ಯೆ ಕಡಿಮೆ ಇದೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಕಾಯಂ ಪ್ರಾಧ್ಯಾಪಕರ ಕೊರತೆ ಎದುರಿಸುತ್ತಿದೆ ಎಂದರು.
ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಚಂದ್ರಯಾನ-3 ಕೈಗೊಳ್ಳುವ ಮೂಲಕ ಸಾಧನೆ ತೋರಿದ್ದಾರೆ. ಭಾರತೀಯರು ಸಂಕಷ್ಟದ ಸಂದರ್ಭದಲ್ಲೂ ಅದ್ಭುತ ಸಾಧನೆ ತೋರುತ್ತಾರೆ ಎಂಬುದು ಚಂದ್ರಯಾನ-3 ಸಾಕ್ಷಿಯಾಗಿದೆ. ಉನ್ನತ ಹುದ್ದೆ ಹಾಗೂ ಸಂಬಳವನ್ನು ಬಯಸುವವರು ಅಮೆರಿಕದ ನಾಸಾವನ್ನು ಸೇರಿಸಿಕೊಳ್ಳುತ್ತಾರೆ. ಆದರೆ, ಇಸ್ರೋ ವಿಜ್ಞಾನಿಗಳು ದೇಶಕೋಸ್ಕರ ದುಡಿಯುವ ಸಂಕಲ್ಪ ತೊಟ್ಟು ದೇಶದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಪ್ರಾಧ್ಯಾಪಕ ಪ್ರೊ.ಡಿ.ವಿ. ಗೋಪಾಲಪ್ಪ ಅವರನ್ನು ಅಭಿನಂದಿಸಲಾಯಿತು. ವಿಶ್ರಾಂತ ಕುಲಪತಿ ಪ್ರೊ. ಮಂಜಪ್ಪ ಡಿ.ಹೊಸಮನೆ, ವಿಭಾಗದ ಮುಖ್ಯಸ್ಥ ಪ್ರೊ.ಎಂ.ಮಹೇಶ ಹಾಗೂ ಇತರರು ಇದ್ದರು.