ಜೂ.14ರಂದು ನಗರದಲ್ಲಿ 3ನೇ ಘಟಿಕೋತ್ಸವ: ಮಂಡ್ಯ ವಿವಿಯ ಕುಲಸಚಿವ ಪ್ರೊ.ಯೋಗಾನರಸಿಂಹಚಾರಿ ಮಾಹಿತಿ

University 3rd Convocation Mandya
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ 2023-24ನೇ ಸಾಲಿನಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ 3ನೇ ಘಟಿಕೋತ್ಸವ ಕಾರ್ಯಕ್ರಮದ ಮೂಲಕ ಪದವಿ ವಿತರಣೆ ಸಮಾರಂಭವನ್ನು ಜೂ.14ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಂಡ್ಯ ವಿವಿಯ ಕುಲಸಚಿವ ಪ್ರೊ.ಯೋಗಾನರಸಿಂಹಚಾರಿ ತಿಳಿಸಿದರು.

2023-24ನೇ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ 815 ವಿದ್ಯಾರ್ಥಿಗಳಿಗೆ ಪದವಿ ವಿತರಣೆ ಮಾಡಲಾಗುವುದು. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಉಪಸ್ಥಿತರಿರಲಿದ್ದಾರೆ. ಎನ್‌ಎಸ್‌ಎಚ್‌ಎಂ ಜ್ಞಾನ ಕ್ಯಾಂಪಸ್‌ನ ನಿರ್ದೇಶಕ ಪ್ರೊ.ಎಸ್.ಎನ್.ಬಂದೋಪದ್ಯಾಯ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಘಟಿಕೋತ್ಸವದಲ್ಲಿ 237 ಸ್ನಾತಕೋತ್ತರ ವಿದ್ಯಾರ್ಥಿಗಳ ಪೈಕಿ 149 ಜನ ವಿದ್ಯಾರ್ಥಿನಿಯರು, 88 ಜನ ವಿದ್ಯಾರ್ಥಿಗಳು, 578 ಸ್ನಾತಕ ವಿದ್ಯಾರ್ಥಿಗಳ ಪೈಕಿ 306 ವಿದ್ಯಾರ್ಥಿನಿಯರು, 278 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಇದರಲ್ಲಿ ಸ್ನಾತಕ ವಿಭಾಗದ 50, ಸ್ನಾತಕೋತ್ತರ ವಿಭಾಗ 27 ಜನ ರ‌್ಯಾಂಕ್ ಹೋಲ್ಡರ್‌ಗಳಿದ್ದಾರೆ. ಸ್ನಾತಕ ವಿಭಾಗದ 297, ಸ್ನಾತಕೋತ್ತರ ವಿಭಾಗ 88 ಜನ ಡಿಸ್ಟಿಂಕ್ಷನ್ ಹಾಗೂ ಸ್ನಾತಕ ವಿಭಾಗದ 15, ಸ್ನಾತಕೋತ್ತರ ವಿಭಾಗ 18 ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳಿಂದ ಮೀಸಲಿರಿಸಲಾದ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಬಳಿ ಬಣ್ಣದ ಕಲರ್ ಕೋಡ್ ನಿಗದಿಪಡಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಬಳಿ ಬಣ್ಣದ ವಸ್ತ್ರಗಳನ್ನು ಮಾತ್ರ ಧರಿಸಿ, ತಮಗೆ ಮೀಸಲಿರಿಸಿದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು.

ಬಿ.ಸ್ವರ್ಣ, ಡಾ.ಬಿ.ಸಿ.ರವಿ, ಡಾ.ಎಂ.ವೈ.ಶಿವರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net