ವೈವಿಧ್ಯ ಕಳೆದುಕೊಳ್ಳುತ್ತಿರುವ ವಿವಿಗಳು

mysore
Published on

ಮೈಸೂರು: ವಿಶ್ವವಿದ್ಯಾಲಯಗಳು ವೈವಿಧ್ಯ ಕಳೆದುಕೊಳ್ಳುತ್ತಿವೆ ಎಂದು ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಕಳವಳ ವ್ಯಕ್ತಪಡಿಸಿದರು.


ಸಾಹಿತ್ಯ ಅಕಾಡೆಮಿ ವತಿಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಿಲ್ಲೆಗೊಂದು ವಿವಿ ಸ್ಥಾಪಿಸಿದ್ದರಿಂದ ವೈವಿಧ್ಯತೆ ಮರೆಯಾಗಿದೆ. ರಾಜಕೀಯ ಪಲ್ಲಟವಾದಂತೆ ಶೈಕ್ಷಣಿಕ ಕ್ಷೇತ್ರದಲ್ಲೂ ಬದಲಾವಣೆಯಾಯಿತು. ಎಲ್ಲ ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.


ಗೌರವ ಹುಟ್ಟಿಸುವಂತಹ ಕೆಲಸಗಳು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿಲ್ಲ. ಪ್ರಾಧ್ಯಾಪಕರ ಬಗ್ಗೆಯೂ ಗೌರವ ಇಲ್ಲ. ವಿವಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. 3 ಲಕ್ಷ ರೂ. ಕೊಡದಿದ್ದರೆ ಪಿಎಚ್.ಡಿಗೆ ನೋಂದಣಿ ಆಗುವುದಿಲ್ಲ. ಲಂಚ ಕೊಟ್ಟೇ ಕುಲಪತಿಯಾಗಬೇಕು. ಇದೆಲ್ಲ ನಮಗೆ ಗೊತ್ತು. ಆದರೆ ಪ್ರಶ್ನೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಎಲ್ಲ ಸರ್ಕಾರಗಳು ಸುಳ್ಳನ್ನು ಸೃಷ್ಟಿಸುತ್ತಿವೆ. ನಮ್ಮಲ್ಲಿ ಏಕಿಷ್ಟು ಸುಳ್ಳು ಹುಟ್ಟಿಕೊಂಡಿದೆ? ನಾವೆಲ್ಲ ಆಲೋಚಿಸಬೇಡವೇ ಎಂದು ಪ್ರಶ್ನಿಸಿದರು.


ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲ ಪ್ರಭುತ್ವಗಳು ಸುಳ್ಳು ಉತ್ಪಾದನೆ ಮಾಡುತ್ತಿವೆ. ಜನರು ಧಂಗೆ ಏಳದಂತೆ, ಪ್ರಶ್ನೆ ಮಾಡುವುದನ್ನು ನಿಯಂತ್ರಿಸುತ್ತಿವೆ. ಏಕೆಂದರೆ ಅವರ ಅಧಿಕಾರ, ಸಾಮ್ರಾಜ್ಯಕ್ಕೆ ಧಕ್ಕೆ ಬರಬಾರದು. ಆದರೆ, ಆ ಕಾಲದ ಎಲ್ಲ ಕವಿಗಳು ಇದನ್ನು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಿದರು.
ಹಳೇ ಕಾಲದ ಕಥೆಯನ್ನು ನಮಗೆ ಅನುಕೂಲವಾಗುವಂತೆ ಕಟ್ಟಿಕೊಳ್ಳಬೇಕು.

ಬಾಬರಿ ಮಸೀದಿ, ಅಯೋಧ್ಯೆ ಕಥೆ ಕಟ್ಟಿ ಸಮರ್ಥನೆ ಮಾಡುತ್ತಿದ್ದೇವೆ. ಸತ್ಯ ಕೂಡ ಕಟ್ಟಿಕೊಂಡದ್ದು. ಅದು ಇರುವುದು ಹೌದು ಎಂದರೆ ಸಂಶೋಧನೆ ಅಗತ್ಯ ಎನಿಸುತ್ತದೆ. ಈಗ ಯಾರು ಯಾರನ್ನೂ ನಂಬದ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರಿಸಿದರು.


ಅಯೋಗ್ಯರಿಗೆ ಅಧಿಕಾರ ದೊರೆಯುತ್ತಿದೆ. ನಾವೆಲ್ಲ ನಮ್ಮನ್ನು ಕೊಂದುಕೊಂಡು ಬದುಕುತ್ತಿದ್ದೇವೆ. ಸತ್ಯ ಅಥವಾ ಸುಳ್ಳು ಬೇರೆ ಮಾಡಲು ನಮಗೆ ಬರುವುದಿಲ್ಲವೇ? ಕಟ್ಟಿಕೊಂಡ ಸತ್ಯವನ್ನು ಹೊಡೆಯುವುದು ವರ್ತಮಾನದ ಅಗತ್ಯ. ಈ ಕೆಲಸವನ್ನು ವಚನಕಾರರು, ಅಂಬೇಡ್ಕರ್ ಮತ್ತು ಬುದ್ಧ ಮಾಡಿದ್ದಾರೆ ಎಂದು ಹೇಳಿದರು.


ನಾವು ಒಂದು ವ್ಯಕ್ತಿತ್ವವನ್ನು ಕಟ್ಟಿಕೊಂಡು ಎಲ್ಲರನ್ನೂ ನಂಬಿಸಿ ನಾವೂ ಅದನ್ನೇ ನಂಬಿಕೊಂಡಿರುತ್ತೇವೆ. ಎಲ್ಲರೂ ನಂಬುವಂತೆ ಇರಬೇಕೆಂದು ಒದ್ದಾಡುತ್ತಿದ್ದೇವೆ. ಆದರೆ, ನಾವು ಇರುವುದು ಬೇರೆ. ಆ ನಂಬಿಕೆಗೆ ಧಕ್ಕೆ ಬರದಂತೆ ಕಷ್ಟಪಡುತ್ತಿರುತ್ತೇವೆ ಎಂದರು.


ಅನುವಾದಕನಷ್ಟು ದೊಡ್ಡ ನಟ ಇನ್ನೊಬ್ಬ ಇಲ್ಲ. ಅನುವಾದಕ ಮೂಲ ಬರಹಗಾರನ ಕಣ್ಣಿನಿಂದ ಲೋಕವನ್ನು ನೋಡಬೇಕು. ತನ್ನದಲ್ಲದ ಲೋಕವನ್ನು ತನ್ನ ಮಾತಿನಲ್ಲಿ ಸಹಜವಾಗಿ ಹೇಳಬೇಕು. ಕನ್ನಡ ಅಭಿಮಾನ, ತೃಪ್ತಿ, ಸಂಭ್ರಮ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net