ವಿಶ್ವ ಮಾನವ ತತ್ವ ಇಂದಿನ ಅನಿವಾರ್ಯ

12sri-1
Published on

ಶೃಂಗೇರಿ: ಕುವೆಂಪು ನಾಡು ಕಂಡ ಶ್ರೇಷ್ಟ ಸಾಹಿತಿ. ಅವರ ಬರಹಗಳಲ್ಲಿ ಪ್ರಾದೇಶಿಕತೆ, ರಾಷ್ಟ್ರೀಯತೆ, ವೈಚಾರಿಕತೆ,ಆಧ್ಯಾತ್ಮಿಕತೆ ಹಾಗೂ ವಿಶ್ವಮಾನವ ತತ್ವ ಅಡಗಿದೆ ಎಂದು ಯುವ ವಾಗ್ಮಿ ಜಿ.ಎಸ್.ರಂಜಿತ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಕುವೆಂಪು ಬೋಧಿಸಿದ ವಿಶ್ವ ಮಾನವ ತತ್ವ ಪ್ರಸ್ತುತ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ. ನಾವು ಸಂಕುಚಿತ ಮನೋಭಾವ ತೊರೆದು ವಿಶ್ವಮಾನವರಾಗುವ ಕಡೆ ಹೆಜ್ಜೆ ಇಟ್ಟಾಗ ಮಾತ್ರ ದೇಶದಲ್ಲಿ ಬಹುತ್ವ ಕಾಣಲು ಸಾಧ್ಯ. ಈ ದೇಶದಲ್ಲಿ ಹುಟ್ಟಿ ಬೆಳೆದ ನಾವು ಭಾರತೀಯರು. ಈ ಪೂರ್ಣದೃಷ್ಟಿಯ ಪರಿಕಲ್ಪನೆ ನಮ್ಮ ಮನೋ ವಿಕಾಸದ ಪ್ರಜ್ಞೆಯನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದರು.

ದೇಶದ ಯಾವುದೇ ಮೂಲೆಗೆ ಹೋದರೂ ನಮ್ಮ ಮೂಲ ಸಂಸ್ಕೃತಿಯ ಐಕ್ಯತೆಯನ್ನು ನಾವು ಇಂದಿಗೂ ಕಾಣುತ್ತೇವೆ. ಕುವೆಂಪು ಕೇವಲ ಕವಿ ಮಾತ್ರವಲ್ಲ.ಅವರೊಳಗಿನ ವಿಶ್ವಪ್ರಜ್ಞೆ ಭೌಗೋಳಿಕ ಗಡಿ ರೇಖೆಗಳನ್ನು ದಾಟಿ ನಿಲ್ಲುವ ಅನನ್ಯವಾದ ಮೌಲ್ಯಗಳು. ಅವರ ಕವಿತೆಯಲ್ಲಿ ರಾಷ್ಟ್ರದ ಕುರಿತು ವಿಶಾಲವಾದ ದೃಷ್ಟಿತ್ವವಿದೆ ಎಂದರು.

ಕಾಲೇಜು ಅಭಿವದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಪೊದುವಾಳ್, ತಾಲೂಕು ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಂ.ಗೋಪಾಲ್, ಪ್ರಾಚಾರ್ಯ ಟಿ.ಆರ್.ಅರುಣ್ ಕುಮಾರ್, ಕನ್ನಡ ಉಪನ್ಯಾಸಕಿ ಝರೀನಾ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ತಾಲೂಕು ಕಸಾಪ ಹೋಬಳಿ ಅಧ್ಯಕ್ಷ ದಿನೇಶ್ ಅಂಗುರ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net