

ಮಂಡ್ಯ: ರೈತ ನಾಯಕ ಜಗಜಿತ್‌ಸಿಂಗ್ ದಲ್ಲೆವಾಲ್ ಪ್ರಾಣ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಬೇಕು ಹಾಗೂ ಜಿಲ್ಲಾದ್ಯಂತ ಮೈಕ್ರೋಫೈನಾನ್ಸ್ ಕಂಪನಿಗಳಿಂದಾಗುತ್ತಿರುವ ಕಿರುಕುಳ, ಆತ್ಮಹತ್ಯೆಯನ್ನು ತಡೆಯುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ(ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸರ್‌ಎಂವಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಪತ್ರ ರವಾನಿಸಲಾಯಿತು. ಕೃಷಿ ಉತ್ಪನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಗಜಿತ್‌ಸಿಂಗ್ ದಲ್ಲೆವಾಲ್ ಅವರು 2024 ನ.26ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಯಾವಾಗ ಬೇಕಾದರೂ ಪ್ರಾಣ ಹೋಗುವ ಪರಿಸ್ಥಿತಿ ಇದೆ ಎಂದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೋರಾಟನಿರತರೊಂದಿಗೆ ಮಾತುಕತೆ ನಡೆಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. 60 ವರ್ಷ ದಾಟಿದ ಎಲ್ಲ ಕೃಷಿಕರಿಗೆ 5000 ರೂ ಮಾಸಿಕ ಪಿಂಚಣಿ ನೀಡಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪವಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವಮಲ್ಲಯ್ಯ, ಭರತ್‌ರಾಜ್, ದೇವಿ, ಸಿ.ಕುಮಾರಿ, ಮರುವನಹಳ್ಳಿ ಶಂಕರ್, ಕೋಣನಹಳ್ಳಿ ಮಂಜು, ಕೃಷ್ಣೇಗೌಡ ಇತರರಿದ್ದರು.