

ಮಂಡ್ಯ: ರೈತರು ಮತ್ತು ಕೃಷಿ ಕಾರ್ಮಿಕರ ರಕ್ಷಣೆ ಮಾಡಲು ಸಮಗ್ರ ಸಾಲಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ರವಾನಿಸಲಾಯಿತು. ಜಿಲ್ಲೆಯ ಜನರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ರಕ್ಷಿಸುವ ಹಾಗೂ ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ರೈತರು ಮತ್ತು ಕೃಷಿ ಕಾರ್ಮಿಕರ ಭೂಮಿ ಹಾಗೂ ಜಾನುವಾರು ಸಂಪನ್ಮೂಲ ರಕ್ಷಿಸುವ ಮೂಲಕ ತೀವ್ರ ಕೃಷಿ ಬಿಕ್ಕಟ್ಟಿನಿಂದಾಗಿ ದಿವಾಳಿಯಾಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದರು.
ಎಲ್ಲ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿಪಡಿಸಬೇಕು. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು. ರಸಗೊಬ್ಬರ, ಬಿತ್ತನ ಬೀಜ, ಕ್ರಿಮಿನಾಶಕ, ವಿದ್ಯುತ್, ನೀರಾವರಿ, ಯಂತ್ರೋಪಕರಣದ ಬಿಡಿ ಭಾಗ ಹಾಗೂ ಟ್ರಾೃಕ್ಟರ್‌ಗಳಂತಹ ಕೃಷಿಗೆ ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಬಾರದು. ಸರ್ಕಾರಿ ಯೋಜನೆಗಳ ಲಾಭವನ್ನು ಬೆಳೆಗಾರರು ಹಾಗೂ ಗೇಣಿದಾರ ರೈತರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ ಕೃಷಿಕಾಗಿ ಪ್ರತ್ಯೇಕ ಕೇಂದ್ರ ಬಜೆಟ್ ರೂಪಿಸಬೇಕು. ಕೃಷಿಯನ್ನು ಕಾರ್ಪೋರೇಟ್‌ಕರಣ ಮಾಡಬಾರದು. ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್‌ಸಿಗಳಿಗೆ ಪ್ರವೇಶ ನೀಡಬಾರದು. ಮುಕ್ತ ವ್ಯಾಪಾರ ಒಡಂಬಡಿಕೆಯಿಂದ ಹೊರಬರಬೇಕು. ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯಸರ್ಕಾರಗಳ ತೆರಿಗೆ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಸಹಕಾರ ಕ್ಷೇತ್ರ ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಯನ್ನು ಎತ್ತಿಹಿಡಿಯಬೇಕು. ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಗೊಳಿಸಬೇಕು. ನರೇಗಾ ಕೂಲಿ ಮೊತ್ತವನ್ನು ದಿನಕ್ಕೆ 600 ರೂಪಾಯಿಗೆ ಹೆಚ್ಚಳ ಮಾಡಬೇಕು. ಮಾತ್ರವಲ್ಲದೆ ದೇಶಾದ್ಯಂತ ಯೋಜನೆಯನ್ನು ಜಲಾನಯನ ಪ್ರದೇಶಗಳ ಆಯೋಜನೆ ಮತ್ತು ಕೃಷಿ ಅಭಿವೃದ್ಧಿಯೊಂದಿಗೆ ಜೋಡಿಸಬೇಕು. ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಸ್ಥಗಿತಕೊಳಿಸಬೇಕು. ಮಾಸಿಕ 26 ಸಾವಿರ ರೂ ರಾಷ್ಟ್ರೀಯ ಕನಿಷ್ಟ ಕೂಲಿಯಾಗಿ ಜಾರಿಗೆ ತರಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಕುಳ್ಳೇಗೌಡ, ಗುರುಸ್ವಾಮಿ, ಶೆಟ್ಟಹಳ್ಳಿ ರವಿಕುಮಾರ್, ಕೆಂಪೂಗೌಡ, ಸತೀಶ್ ಇತರರಿದ್ದರು.