ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೆಲಮಂಗಲದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

16 Nela Ph 01 DSS Manavi
Published on

ನೆಲಮಂಗಲ: ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ಸಮಾವೇಶಗೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಕೇಂದ್ರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಬಿ.ಹನುಮಂತರಾಯಪ್ಪ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ದುಷ್ಕರ್ಮಿಗಳು ಮಾಡಿರುವ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ದೇಶದ ಜನತೆ ತಲೆತಗ್ಗಿಸುವ ವಿಚಾರ. ಈ ರೀತಿ ಕೃತ್ಯಗಳು ಮತ್ತೆ ಮರುಕಳಿಸಿದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದರು.

ದೇಶದಲ್ಲಿ ಈಗಾಗಲೇ ನಿತ್ಯವೂ ಹಿಂದುಳಿದ ಜನರ ಮೇಲೆ ಶೋಷಣೆ, ದೌರ್ಜನ್ಯ, ಹತ್ಯೆ ಪ್ರಕರಣ ಹೆಚ್ಚುತ್ತಿರುವುದು ಬೇಸರದ ಸಂಗತಿ. ದುಷ್ಕರ್ಮಿಗಳಿಗೆ ಕಾನೂನು ರೀತಿ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ. ಹೆಣ್ಣನ್ನು ದೇವರೆಂದು ಪೂಜಿಸುವ ದೇಶದಲ್ಲಿ ಇಂತಹ ಕೃತ ನಡೆಯುತ್ತಿರುವುದು ಅಮಾನವೀಯ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಹಸಂಚಾಲಕ ಶಿವಕುಮಾರ್‌ರಾಮಪ್ಪ ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ದಂಡೂವಯ್ಯ, ಮುಖಂಡರಾದ ಎನ್.ಪಿ.ಗಂಗಾಧರ್, ಮೈಲಾರಪ್ಪ, ಜಯರಾಮ್, ನರಸಿಂಹಯ್ಯ, ಸಿ.ಹನುಮಂತರಾಜು, ಎಸ್.ಮುನಿಯಪ್ಪ, ಎನ್.ಗಂಗರಾಜು, ನಾಗರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net