

ವಿಜಯಪುರ: ರಾಜ್ಯದೆಲ್ಲೆಡೆ ಕೋವಿಡ್-19 ಪಿಡುಗು ಜೋರಾಗಿದ್ದು, ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಹೆಚ್ಚಿನವರು ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚ ಮಾಡುತ್ತಿದ್ದಾರೆ. ಆದರೆ, ದೇವನಹಳ್ಳಿಯ ತಾಯಿ ಮತ್ತು ಮಕ್ಕಳ ಕೇಂದ್ರದಲ್ಲಿ ಆರಂಭಿಸಿರುವ ಕೋವಿಡ್ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತಿದೆ.
ಇಲ್ಲಿನ ವೈದ್ಯರು ಮತ್ತು ಇತರ ಸಿಬ್ಬಂದಿ ಅತ್ಯುತ್ತಮ ಕಾರ್ಯನಿಷ್ಠೆ, ಬದ್ಧತೆಯಿಂದ ಕೆಲಸ ಮಾಡುತ್ತಿರುವ ಪರಿಣಾಮ ಸೋಂಕಿತರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ. ತನ್ಮೂಲಕ ಅತ್ಯುತ್ತಮ ಸರ್ಕಾರಿ ಕೋವಿಡ್ ಆಸ್ಪತ್ರೆ ಎಂಬ ಹಿರಿಮೆಯೂ ಈ ಕೇಂದ್ರಕ್ಕೆ ದಕ್ಕಿದೆ.
50 ಹಾಸಿಗೆ ಸೌಲಭ್ಯ: ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಸೌಲಭ್ಯದೊಂದಿಗೆ ಕೋವಿಡ್-19 ಕೇಂದ್ರ ಆರಂಭಿಸಲಾಯಿತು. ಆಸ್ಪತ್ರೆಗೆ ಬರುವ ಸೋಂಕಿತರಿಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸ ಮೂಡಿಸುವ ವೈದ್ಯರು ತಕ್ಷಣವೇ ಔಷಧೋಪಚಾರ ಆರಂಭಿಸುತ್ತಾರೆ.
ಪ್ರತಿ ದಿನ ನಾಲ್ಕೈದು ಬಾರಿ ಆಕ್ಸಿಮೀಟರ್ ಬಳಸಿ ರೋಗಿಗಳ ಆಮ್ಲಜನಕ ಮಟ್ಟವನ್ನು ಪರಿಶೀಲಿಸುವ ಸಿಬ್ಬಂದಿ, ದಿನಕ್ಕೆರಡು ಬಾರಿ ಮಧುಮೇಹ ಮತ್ತು ರಕ್ತದೊತ್ತಡವನ್ನೂ ಪರಿಶೀಲಿಸುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ಬರುವ ವೈದ್ಯರು ಅವಶ್ಯಕ ಔಷಧೋಪಚಾರದ ಬಗ್ಗೆ ಸಲಹೆ ನೀಡುತ್ತಾರೆ. ಆಸ್ಪತ್ರೆಯಲ್ಲಿ 8 ವೆಂಟಿಲೇಟರ್‌ಗಳು, ವಿಶೇಷ ಕೊಠಡಿಗಳು, ಪ್ರತ್ಯೇಕ ಮಹಿಳಾ ಕೊಠಡಿಗಳು ಸೇರಿ ಎಲ್ಲ ಸೌಲಭ್ಯಗಳೂ ಇವೆ. ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆಸ್ಪತ್ರೆಯನ್ನು ಕ್ರಿಮಿನಾಶಕ ಹಾಕಿ ಸ್ವಚ್ಛಗೊಳಿಸುತ್ತಾರೆ.
ಶುಚಿ-ರುಚಿಯಾದ ಬಿಸಿ ಆಹಾರ: ಬೆಳಗ್ಗೆ 8 ಗಂಟೆಗೆ ಬಿಸಿ ಉಪಹಾರ, 11 ಗಂಟೆಗೆ ರಾಗಿ ಅಥವಾ ರವೆ ಗಂಜಿ ಹಾಗೂ ಹಣ್ಣು, ಮಧ್ಯಾಹ್ನ 2ಕ್ಕೆ ಊಟ , ಸಂಜೆ ನಾಲ್ಕೂವರೆಗೆ ಬಾಳೆಹಣ್ಣು ಹಾಗೂ ಬಿಸ್ಕತ್, ನಂತರ ರಾತ್ರಿ ಊಟವನ್ನು ನೀಡಲಾಗುತ್ತದೆ.
ತೀರಾ ವಿಷಮ ಸ್ಥಿತಿಯಲ್ಲಿ 74 ವರ್ಷದ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಇಲ್ಲಿಗೆ ಬಂದಾಗ ಕುಳಿತುಕೊಳ್ಳಲೂ ಸಾಧ್ಯವಾಗದ ಸ್ಥಿತಿ ಇತ್ತು. ಈಗ ವೈದ್ಯರು ಮತ್ತು ಸಿಬ್ಬಂದಿ ವರ್ಗದವರ ಉತ್ತಮ ಸೇವೆಯಿಂದ ಪುನರ್ಜನ್ಮ ಪಡೆದು ಆಸ್ಪತ್ರೆಯಿಂದ ಮರಳುತ್ತಿದ್ದೇನೆ. ಪದ್ಮನಾಭ್ ಬೀದರ್ ಮೂಲದ ಸೋಂಕಿತರು ವಿಜಯಪುರ ಮೂಲದ 80 ವರ್ಷದ ನಾನು ಕರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಬಂದೆ. ಉತ್ತಮ ವೈದ್ಯೋಪಚಾರದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಕೃಷ್ಣಪ್ಪ, ಶಿಡ್ಲಘಟ್ಟ ತಾಲೂಕು ನಿವೃತ್ತ ಬಿಇಒ ಉತ್ತಮ ಚಿಕಿತ್ಸೆ ಕೊಡುತ್ತಿರುವುದರಿಂದ, ಸಾವಿನ ಸಂಖ್ಯೆ ಕಡಿಮೆಯಿದೆ. ರೋಗಿಗಳ ಸ್ಥಿತಿ ತೀರಾ ಬಿಗಡಾಯಿಸಿದಾಗಲೂ ಇಲ್ಲಿಯೇ ಚಿಕಿತ್ಸೆ ನೀಡಿ, ಚೇತರಿಸಿಕೊಳ್ಳಲು ಸಹಕರಿಸಲಾಗುತ್ತಿದೆಯೇ ಹೊರತು, ಬೇರೆ ಕೋವಿಡ್ ಕೇಂದ್ರಗಳಿಗೆ ಕಳುಹಿಸುತ್ತಿಲ್ಲ. ಡಾ. ಸಂಜಯ್, ತಾಲೂಕು ವೈದ್ಯಾಧಿಕಾರಿ ಸ್ವಚ್ಛತಾ ಕಾರ್ಯಕ್ಕೆ 14 ಮಂದಿ ನೇಮಕಗೊಂಡಿದ್ದಾರೆ. ಆದರೆ, ಸೋಂಕಿನ ಭೀತಿಯಿಂದ ಕೇವಲ ನಾಲ್ವರು ಕೆಲಸಕ್ಕೆ ಬರುತ್ತಿದ್ದೇವೆ. ನಮಗೂ 2 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಇವತ್ತಲ್ಲ ನಾಳೆ ಬರುತ್ತದೆ ಎಂಬ ಆಸೆಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಹೆಸರು ಹೇಳಲಿಚ್ಛಿಸದ ಸ್ವಚ್ಛತಾ ಕೆಲಸಗಾರರು
800ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ: ದೇವನಹಳ್ಳಿ ಕೋವಿಡ್ ಕೇಂದ್ರವನ್ನು ಏ.22ರಂದು ಆರಂಭಿಸಲಾಗಿದೆ. ಇದುವರೆಗೂ 800ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಂಡಿದ್ದು, 7 ಜನ ಮೃತಪಟ್ಟಿದ್ದಾರೆ. 216 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಪರಿಸ್ಥಿತಿ ತೀರಾ ಬಿಗಡಾಯಿಸಿದ 70 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇತರೆ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ಕೊರತೆಗಳು ಅಪಾರ: ದೇವನಹಳ್ಳಿ ಕೋವಿಡ್ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿದೆ. ಮೂವರು ವೈದ್ಯರು ಕೆಲಸ ಮಾಡುತ್ತಿದ್ದಾರೆ. 20 ನರ್ಸ್‌ಗಳ ಜಾಗದಲ್ಲಿ ಕೇವಲ 8 ಜನ ಕೆಲಸ ಮಾಡುತ್ತಿದ್ದಾರೆ.
ಕೋತಿಗಳ ಹಾವಳಿ: ಈ ಕೇಂದ್ರದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ಕಟ್ಟಡದೊಳಗೆ ನುಗ್ಗುವ ಕೋತಿಗಳು ಕಸ ಚೆಲ್ಲುತ್ತವೆ. ರೋಗಿಗಳನ್ನು ಬೆದರಿಸುತ್ತವೆ. ಆದ್ದರಿಂದ, ಕಿಟಕಿಗಳಿಗೆ ಗ್ರಿಲ್ ಹಾಕಿಸಿ, ಅವುಗಳ ಉಪಟಳದಿಂದ ಪಾರು ಮಾಡಬೇಕು ಎಂದು ರೋಗಿಗಳು ಮನವಿ ಮಾಡಿಕೊಂಡಿದ್ದಾರೆ.