

ಧಾರವಾಡ: ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಸೋಮವಾರ ಗುರುಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಯಿ- ತಂದೆಯರ ಪಾದಪೂಜೆ ಮಾಡಿ ಗುರುಪೂರ್ಣಿಮೆಯ ಸಾರ್ಥಕತೆ ಮೆರೆದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದುದು ಮನೆ ಮತ್ತು ಶಾಲೆಯಿಂದ. ಆದರೆ, ಮನೆಗಳಲ್ಲಿ ಆರ್ಥಿಕ ಪರಿಸ್ಥಿತಿಯ ನಿರ್ವಹಣೆ, ಸಣ್ಣ ಕುಟುಂಬಗಳಿರುವುದರಿಂದ ಮಕ್ಕಳಿಗೆ ಸಂಸ್ಕಾರ ನೀಡಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಪಾಲಕರ ಪಾದಪೂಜೆ ಮಾಡಿಸುವ ಮೂಲಕ ಪಾಲಕರು- ಮಕ್ಕಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ನಡುವೆಯೂ ಇಂಥ ಪ್ರಯತ್ನ ಅನುಕರಣೀಯ ಎಂದರು.
ಮಕ್ಕಳ ಯಶಸ್ಸಿನ ಹಿಂದೆ ಪಾಲಕರ ತ್ಯಾಗ, ಶ್ರಮ, ಪ್ರೀತಿ ಅಗಾಧವಾ. ಇದಕ್ಕೆ ಪ್ರತಿಯಾಗಿ ಮಕ್ಕಳು ಪಾಲಕರಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಪಾಲಕರ ಸಂಧ್ಯಾಕಾಲದಲ್ಲಿ ಅವರನ್ನು ಮಕ್ಕಳಂತೆ ನೋಡಿಕೊಳ್ಳುವುದು. ಈ ರೀತಿಯ ಭಾವನೆ ಮಕ್ಕಳಲ್ಲಿ ಬರುವ ಕಾರ್ಯಕ್ರಮ ಆಯೋಜನೆ ಆಗಿದ್ದು ಶ್ಲಾಘನೀಯ ಎಂದರು.
ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಎಸ್‌ಡಿಎಂ ಕಾರ್ಯದರ್ಶಿ ಡಾ. ಜಿವಂಧರಕುಮಾರ, ಪ್ರಾಚಾರ್ಯೆ ಸಾಧನಾ ಎಸ್., ಮಹಾವೀರ ಉಪಾಧ್ಯೆ, ಇತರರಿದ್ದರು.