

ನರಗುಂದ: ಸರ್ಕಾರಿ ನೌಕರರ ಹಣಕಾಸಿನ ತುರ್ತು ಅವಶ್ಯಕತೆಗೆ ಸಹಕಾರಿ ಸಂಘಗಳು ಆಸರೆಯಾಗಿವೆ. ಸಹಕಾರಿ ಸಂಘಗಳ ಬೆಳವಣಿಗೆಗೆ ಕರ್ತವ್ಯ ಮತ್ತು ಹೊಣೆಗಾರಿಕೆ ಅತ್ಯಂತ ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದು ಪ್ರಭಾರಿ ಬಿಇಒ ಬಿ.ಎಫ್. ಮಜ್ಜಗಿ ಹೇಳಿದರು.
ಪಟ್ಟಣದ ಮಾರ್ಕಂಡಯ್ಯ ಕಲ್ಯಾಣಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನೌಕರರ ಪತ್ತಿನ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಪ್ರಜಾಸತ್ತಾತ್ಮಕ ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿ ಸಮಾಜದಲ್ಲಿ ಆರ್ಥಿಕ ಸಮಾನತೆ ಉತ್ತೇಜಿಸಿ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವುದು ಅದರ ಉದ್ದೇಶವಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀ ಶೈಲ ತಳವಾರ ಮಾತನಾಡಿ, ಸರ್ಕಾರಿ ನೌಕರರ ಆಶೋತ್ತರಗಳನ್ನು ಈಡೇರಿಸುವ ಸದುದ್ದೇಶದಿಂದ 10 ವರ್ಷಗಳ ಹಿಂದೆ ನೌಕರರ ಸಹಕಾರಿ ಸಂಘ ಸ್ಥಾಪಿತಗೊಂಡಿದೆ. ಗ್ರಾಹಕರು, ಸಿಬ್ಬಂದಿ ಹಾಗೂ ನಿರ್ದೇಶಕರು, ಸಹಕಾರಿಗಳು ಸಂಘಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸಿದರೆ ಸಂಘಗಳು ಯಶಸ್ವಿಯಾಗಿ ನಡೆಯುತ್ತವೆ ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಡಿ.ಎಚ್. ಅಜ್ಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಡಾ. ಜಡೇಶ ಭದ್ರಗೌಡ್ರ, ಸಂಘದ ಉಪಾಧ್ಯಕ್ಷ ಎಸ್.ಎಲ್. ಪಾಟೀಲ, ಯು.ಬಿ. ಅಸುಂಡಿ, ಪ್ರಶಾಂತ ದೇವರಮನಿ, ಝಡ್.ಎಂ. ಖಾಜಿ, ಎನ್.ಆರ್. ನಿಡಗುಂದಿ, ಪಿ.ಸಿ. ಕಲಹಾಳ, ಎಂ.ಎಂ. ಗಸ್ತಿ, ಸಂಘದ ಆಡಳಿತ ಮಂಡಳಿ ನಿರ್ದೇಶಕ ಭೂಸರಡ್ಡಿ ಕ್ಯಾಮನಗೌಡ್ರ ಉಪಸ್ಥಿತರಿದ್ದರು. ಬಿ.ಎಂ. ಬೋಯಿಟೆ ನಿರ್ವಹಿಸಿದರು.