ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡಿ: ಸಚಿವರಿಗೆ ರೇಷ್ಮೆ ಬೆಳೆಗಾರರ ಒಕ್ಕೂಟದಿಂದ ಮನವಿ

Shivalingiha(Reshme Okutta)
Published on

ಮಂಡ್ಯ: ಬೆಳೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟದಿಂದ ಸಚಿವರಿಗೆ ಡಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ರೇಷ್ಮೆಗೂಡಿನ ಬೆಲೆ ತೀವ್ರ ಕುಸಿತವಾಗಿದೆ. ವರ್ಷದಲ್ಲಿ 2 ತಿಂಗಳು ಮಾತ್ರ ಬೆಳೆಗಾರರಿಗೆ ಸುಧಾರಿತ ಬೆಲೆ ಸಿಗುತ್ತಿದ್ದು, ಉಳಿದೆಲ್ಲ ತಿಂಗಳಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುವಂತಾಗಿದೆ. ಆದ್ದರಿಂದ ಪ್ರತಿ ಕೆ.ಜಿ ಸಿ.ಬಿ ಗೂಡಿಗೆ 600 ರೂ ಹಾಗೂ ಸಿ.ಎಸ್.ಆರ್ ಗೂಡಿಗೆ 800 ರೂ ಬೆಲೆಯನ್ನು ನಿಗದಿಗೊಳಿಸಬೇಕು. ನಿರ್ದಿಷ್ಟ ಬೆಲೆಗಿಂತ ಕಡಿಮೆ ಧಾರಣೆಯಾದಲ್ಲಿ ಪ್ರತಿ ಕೆ.ಜಿ ಗೆ ಸರ್ಕಾರ 100 ರೂನಿಂದ 150 ರೂ ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಲಾಯಿತು.

ರೇಷ್ಮೆಗೂಡು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಅಂತೆಯೇ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಬೆಳೆಗಾರರು ರೇಷ್ಮೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಬೆಳೆಗಾರರಿಗೆ ಮಾಹಿತಿ ನೀಡಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ನಿಟ್ಟಿನಲ್ಲಿ ನೇಮಕಾತಿ ಮಾಡಿಸಬೇಕು. ಹುಳು ಸಾಗಾಣಿಕೆ ಮನೆ ನಿರ್ಮಾಣಕ್ಕೆ ಕೊಡುತ್ತಿರುವ ಸಹಾಯಧನವನ್ನು ಹೆಚ್ಚಿಸಬೇಕು. ಖಾಸಗಿ ಚಾಕಿ ಸಾಕಾಣಿಕೆದಾರರು ಇಷ್ಟಬಂದಂತೆ ಬೆಲೆ ನಿಗದಿ ಮಾಡಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ನಿರ್ದಿಷ್ಟ ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net