

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯನ್ನು ಸವರ್ಣೀಯ ಅನಿಲ್‌ಕುಮಾರ್ ಸಜೀವ ದಹನ ನಡೆಸಿದ್ದಾನೆ. ಆದರೆ ಈ ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ದಿಕ್ಕು ತಪ್ಪಿಸುತ್ತಿರುವ ಡಿವೈಎಸ್ಪಿ ಚಲುವರಾಜು, ಇನ್‌ಸ್ಪೆಕ್ಟರ್ ಆನಂದೇಗೌಡ, ಎಸ್‌ಐ ಸುಬ್ಬಯ್ಯ ಮತ್ತು ವೈರಮುಡಿಗೌಡ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಎಸ್ಪಿ ಕಚೇರಿ ಎದುರು ಧರಣಿ ನಡೆಸಿದ ಮುಖಂಡರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಮೇ 17ರ ಮಧ್ಯಾಹ್ನ ಜಯಕುಮಾರ ಎಂಬ ಯುವಕನನ್ನು ಅದೇ ಗ್ರಾಮದ ಅನಿಲ್‌ಕುಮಾರ್ ಕೊಲೆ ಮಾಡಿ ಹುಲ್ಲಿನ ಮೆದೆಗೆ ಹಾಕಿ ಸುಟ್ಟು ಹಾಕಿದ್ದ ವಿಚಾರ ಅಲ್ಲಿನ ಗ್ರಾಮದ ಜನತೆ ಮಾತನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ದೂರು ದಾಖಲಿಸುವಾಗ ಆತ್ಮಹತ್ಯೆ ಎಂದು ಬಲವಂತವಾಗಿ ದೂರು ದಾಖಲಿಸಿಕೊಂಡು ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆಂದು ದೂರಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಾಗಮಂಗಲದ ನರಸಿಂಹಮೂರ್ತಿ, ಹನಕೆರೆ ಗಂಗರಾಜು, ಅಭಿಗೌಡ, ಎಂ.ವಿ. ಕೃಷ್ಣ, ಸೋಮನಹಳ್ಳಿ ಅಂದಾನಿ, ಟಿ.ಡಿ.ನಾಗರಾಜು, ನರಸಿಂಹಮೂರ್ತಿ, ವಕೀಲ ರಾಮಯ್ಯ, ಚಿಕ್ಕಮಂಡ್ಯ ಮೋಹನ್‌ಕುಮಾರ್ ಇತರರಿದ್ದರು.