ಅರ್ಚಕರು, ಪುರೋಹಿತರ ನೆರವಿಗಾಗಿ ಒಕ್ಕೂಟ ಪ್ರಾರಂಭ: ಜಿಲ್ಲಾಧ್ಯಕ್ಷ ಎನ್.ಎಸ್.ನವೀನ್ ಹೇಳಿಕೆ

3
Published on

ಮಂಡ್ಯ: ರಾಜ್ಯದ ಹಿಂದು ದೇವಾಲಯಗಳ ಅರ್ಚಕರು ಮತ್ತು ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಒಕ್ಕೂಟ ರಚಿಸಲಾಗಿದೆ ಎಂದು ಹಿಂದು ದೇವಾಲಯಗಳ ಅರ್ಚಕರು ಮತ್ತು ಪುರೋಹಿತರ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಎಸ್.ನವೀನ್ ತಿಳಿಸಿದರು.

ಎಲ್ಲ ವರ್ಗದ ಅರ್ಚಕ ಮತ್ತು ಪುರೋತರ ಮನೋವಿಕಾಸ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಸಂಸ್ಕೃತ ಶಿಕ್ಷಣ, ಸರ್ವರಿಗೂ ವೇದ ತರಗತಿಗಳ ಆಯೋಜನೆ ಜತೆಗೆ ಪ್ರಾಚೀನ ಪುರಾಣ ಗ್ರಂಥಗಳ ಪುಸ್ತಕಾವಲೋಕನ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದು ಧರ್ಮದ ಬೆಳವಣಿಗಾಗಿ ಧಾರ್ಮಿಕ ಶಿಕ್ಷಣ, ಆಯ್ದ ದೇವಾಲಯಗಳಲ್ಲಿ ಧಾರ್ಮಿಕ ಸಭೆಗಳ ಆಯೋಜನೆ ಮತ್ತು ಧರ್ಮ ಪ್ರಚಾರ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅರ್ಚಕ, ಪುರೋಹಿತರಲ್ಲಿ ಸಾಮಾಜಿಕ ಸಾಮರಸ್ಯ ವರ್ಧನೆಗಾಗಿ ಕಾರ್ಯಕ್ರಮ, ಸಂಕಷ್ಟದಲ್ಲಿರುವ ಅರ್ಚಕರು ಮತ್ತು ಪುರೋಹಿತರ ನೆರವಿಗೆ ಸ್ಪಂದಿಸುವ ಕೆಲಸವನ್ನೂ ಒಕ್ಕೂಟ ಮಾಡಲಿದೆ. ಇನ್ನು ರಾಜ್ಯದ ಎ, ಬಿ ದರ್ಜೆಯ ದೇವಾಲಯಗಳು ಸುಭೀಕ್ಷವಾಗಿದ್ದು, ಅಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಸಿ ಮತ್ತು ಡಿ ದರ್ಜೆ ದೇವಾಲಯಗಳಲ್ಲಿ ಹೆಚ್ಚಿನ ತೊಂದರೆ ಇದ್ದು, ಕೇವಲ ತಸ್ಥಿಕ್ ಹಣವನ್ನೇ ನಂಬಿಕೊಂಡು ದೇವಾಲಯದ ಕೈಂಕರ್ಯಗಳನ್ನು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಅವುಗಳನ್ನೂ ಪುನರುತ್ಥಾನಗೊಳಿಸಿ, ಸಮಾಜದ ಸಹಭಾಗಿತ್ವದಲ್ಲಿ ಅಭಿವೃದ್ಧಿಯಪಥದತ್ತ ಕೊಂಡೊಯ್ಯುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ವಿಶ್ವನಾಥ ದೀಕ್ಷಿತ್, ತಾಲೂಕು ಅಧ್ಯಕ್ಷ ದಯಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net