ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ

gaowda okkuta
Published on

ಮಡಿಕೇರಿ: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.೭ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ೯ ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದರು.

ಜ.೨೦ ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿರುವ ಸಂಘಟನೆಯೊಂದರ ಅಧ್ಯಕ್ಷರು ಹಾಗೂ ಕೆಲವು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಸಂದರ್ಭ ನಾವು ನೀಡಿದ ಮನವಿ ಪತ್ರದಲ್ಲಿದ್ದ ವಿಚಾರಗಳು ಎಲ್ಲೆ ಮೀರಿರಲಿಲ್ಲ. ಆದರೆ, ಅಖಿಲ ಕೊಡವ ಸಮಾಜ ನೀಡಿದ ಮನವಿಯಲ್ಲಿ ನೇರವಾಗಿ ಅರೆಭಾಷೆ ಗೌಡರನ್ನು ಉಲ್ಲೇಖಿಸಲಾಗಿದೆ ಮತ್ತು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಕೊಡವರ ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಪ್ರಸ್ತಾಪಿಸುವ ಬೇಡಿಕೆಗಳಿಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಅರೆಭಾಷೆ ಗೌಡರನ್ನು ಗುರಿ ಮಾಡಿರುವುದು ಸರಿಯಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅರೆಭಾಷೆ ಗೌಡರನ್ನು ದೂಷಿಸಿರುವ ಮನವಿ ಪತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅನಾಮದೇಯ ವ್ಯಕ್ತಿ ಎಂದು ಹೇಳಲಾಗಿದೆ. ಈ ಮನವಿ ಪತ್ರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡವಿರುವ ಶಂಕೆ ಇದೆ. ಅರೆಭಾಷೆ ಗೌಡರನ್ನು ನೇರವಾಗಿ ಉಲ್ಲೇಖಿಸಿರುವ ೯ ಅಂಶಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಗೌಡರು ನಡೆಸಿದ ಜಾಥಾಕ್ಕೆ ಹೊರ ಜಿಲ್ಲೆಯ ಅರೆಭಾಷಿಕರಲ್ಲದವರನ್ನು ಕರೆ ತರಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಶೇ.೧೦೦ ರಷ್ಟು ಅರೆಭಾಷೆ ಗೌಡರು ಜಾಥಾದಲ್ಲಿ ಪಾಲ್ಗೊಂಡಿರುವುದನ್ನು ಆರೋಪ ಮಾಡುತ್ತಿರುವವರು ಮನಗಾಣಬೇಕು. ಅರೆಭಾಷಿಕರಲ್ಲದವರನ್ನು ಕರೆತಂದು ಜಾಥಾ ಮಾಡುವಷ್ಟು ಕೀಳುಮಟ್ಟಕ್ಕೆ ನಾವು ಇಳಿಯುವುದಿಲ್ಲವೆಂದು ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದರು.

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರ ಆ ಊರಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಗೌಡ ಸಮಾಜಗಳ ಒಕ್ಕೂಟ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಆದರೆ, ಗೌಡ ಸಮುದಾಯಕ್ಕೆ ನೋವಾದರೆ ಅವರ ಬೆಂಬಲಕ್ಕೆ ಒಕ್ಕೂಟ ನಿಲ್ಲಲಿದೆ. ನಾವು ಶಾಂತಿಯನ್ನು ಬಯಸುವವರು, ಶಾಂತಿಸಭೆ ನಡೆಯಬೇಕು ಎನ್ನುವ ಅಪೇಕ್ಷೆ ನಮ್ಮದಾಗಿತ್ತು. ಆದರೆ, ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೊಡವ ಸಮಾಜದವರು ಹೇಳಿರುವುದರಿಂದ ನಾವು ಕೂಡ ಪಾಲ್ಗೊಳ್ಳುವುದಿಲ್ಲ ಎಂದರು.

ಒಕ್ಕೂಟದ ಖಜಾಂಚಿ ಆನಂದ ಕರಂದ್ಲಾಜೆ ಮಾತನಾಡಿ, ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೊಡಗಿನ ಎಲ್ಲಾ ಜನಾಂಗದವರಿಂದ ಆಯ್ಕೆಯಾಗಿದ್ದು, ಕೇವಲ ಒಂದು ಜನಾಂಗದ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿ ಮತ್ತೊಂದು ಜನಾಂಗದ ವಿರುದ್ಧದ ಮನವಿ ಪತ್ರಕ್ಕೆ ಸಾಕ್ಷಿಯಾಗಿರುವುದು ಖಂಡನೀಯ. ಬಿಜೆಪಿ ಪಕ್ಷ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ಪಕ್ಷದಿಂದ ನಮ್ಮ ಜನಾಂಗವು ಅಂತರ ಕಾಪಾಡಿಕೊಳ್ಳಲಾಗುವುದು. ಕೊಡಗಿನಲ್ಲಿ ಗೌಡರಿಗೆ ಅವರ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡದ ಪಕ್ಷಗಳನ್ನು ದೂರ ಇಡಲಾಗುವುದು ಎಂದು ಎಚ್ಚರಿಸಿದರು.

ಈ ಹಿಂದಿನ ನಮ್ಮ ದೂರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿ ಸಿಎನ್‌ಸಿ ಮತ್ತು ಇತರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಶಾಂತಿ ನೆಲೆಸಿರುತ್ತಿತ್ತು. ದೂರು ದಾಖಲು ಮಾಡದ ನಡೆಯ ಹಿಂದೆ ಕಾಣದ ಕೈಗಳ ಒತ್ತಡಕ್ಕೆ ಒಳಗಾದಂತೆ ಕಂಡುಬರುತ್ತಿದೆ ಎಂದು ಆನಂದ ಕರಂದ್ಲಾಜೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್, ನಿರ್ದೇಶಕರಾದ ಚಿಲ್ಲನ ಗಣಿ ಪ್ರಸಾದ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net