ಮಾ.6ರಂದು ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಪಾದಯಾತ್ರೆ: ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾಹಿತಿ

Union of Farmers Union press conference Mandya
Published on

ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ಹಲವು ಹಕ್ಕೊತ್ತಾಯ ಈಡೇರಿಸುವಂತೆ ಆಗ್ರಹಿಸಿ ರೈತ ಯುವ ನಾಯಕ ಪಚ್ಚೆ ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಸಂಘಗಳ ಏಕೀಕರಣ ಒಕ್ಕೂಟದ ವತಿಯಿಂದ ಮಾ.6ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ತಿಳಿಸಿದರು.

ರೈತ ವಿರೋಧಿ ನೀತಿ ಅನುಸರಿಸುವ ಸರ್ಕಾರದ ಧೋರಣೆಯಿಂದ ಅನ್ನದಾತರ ಸಾಲದ ಹೊರೆ ಹೆಚ್ಚಾಗಿ, ಕುಡಿಯುವ ವರ್ಗ ಆರ್ಥಿಕ ಶಕ್ತಿ ಬಲವರ್ಧನೆಗೆ ಯಾವುದೇ ಭರವಸೆ ಇಲ್ಲವಾಗಿದೆ. ಕೃಷಿ ಚಟುವಟಿಗೆ ಸಂಬಂಧಿಸಿದಂತೆ ಅಗತ್ಯ ವಸ್ತು, ಉಪಕರಣದ ಬೆಲೆ ಹೆಚ್ಚಾಗಿದೆ. ಅವುಗಳ ಮೇಲೆ ಜಿಎಸ್‌ಟಿ ಹೊರೆ, ಬೆಳೆಗೆ ಕನಿಷ್ಟ ಬೆಂಬಲ ಬೆಲೆ ದೊರೆಯದಿರುವುದು ಮತ್ತಿತರ ಕಾರಣದಿಂದಾಗಿ ಕೃಷಿ ಉದ್ದೇಶಿದ ಜಮೀನು ಶೇ.58ರಷ್ಟು ಕ್ಷೀಣಿಸಿದೆ. ರೈತರ ಮಕ್ಕಳು ಬದುಕು ಕಟ್ಟಿಕೊಳ್ಳಲಾಗದೆ ವೈವಾಹಿಕ ಜೀವನದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಕೃಷಿ ಅವನತಿಯತ್ತ ಸಾಗುತ್ತಿರುವ ಹಿನ್ನಲೆ ಹೋರಾಟದ ಅನಿವಾರ್ಯತೆ ಹೆಚ್ಚಿದೆ. ರಾಜ್ಯ ಸರ್ಕಾರ ಈ ಬಾರಿ ಕೃಷಿ ಬಜೆಟ್ ಮಂಡನೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಮನ್ನಾ, ಸರಳ ರೂಪದಲ್ಲಿ ಸಾಲ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಅವಕಾಶ, ವಿದ್ಯುತ್ ಸಂಪರ್ಕ, ಹಾಲಿನ ದರ ಮತ್ತು ಪ್ರೋತ್ಸಾಹ ಧನ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಾಧ್ಯಮ ಕಾರ್ಯದರ್ಶಿ ಪ್ರಕಾಶ್, ಜವರೇಗೌಡ, ಸುರೇಶ್, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net