

ಮಂಡ್ಯ: ನಗರದ ರೈತ ಸಭಾಂಗಣದಲ್ಲಿ ಜ.11ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಉದ್ಘಾಟನೆ ಹಾಗೂ ಜಿಲ್ಲಾ ಸೌಹಾರ್ದ ಸಹಕಾರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ತಿಳಿಸಿದರು.
ಸಮ್ಮೇಳನವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸುವರು. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಶಯ ಭಾಷಣ ಮಾಡುವರು. ಒಕ್ಕೂಟದ ನಾಮಫಲಕವನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಅಧ್ಯಕ್ಷ ಬಿ.ನಂಜನಗೌಡ ಲೋಕಾರ್ಪಣೆ ಮಾಡಲಿದ್ದು, ಶಾಸಕ ರವಿಕುಮಾರ್ ಗಣಿಗ ಅವರು ಒಕ್ಕೂಟದ ದಿನದರ್ಶಿಕೆ ಬಿಡುಗಡೆ ಮಾಡಿ ಹಿರಿಯ ಸಹಕಾರಿಗಳನ್ನು ಸನ್ಮಾನಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಬಳಸುವ ಪುಸ್ತಕಗಳು, ಗಣಕ ತಂತ್ರಜ್ಞಾನ, ಪಿಗ್ಮಿ ಮಿಷನ್, ಪಿಗ್ಮಿ ರೋಲ್‌ಗಳಿಗೆ ಸಂಬಂಧಿಸಿದಂತೆ ಸಮ್ಮೇಳನದಲ್ಲಿ ಮಳಿಗೆಗಳನ್ನು ಪ್ರದರ್ಶಿಸಲಾಗುವುದು. ಜಿಲ್ಲೆಯಲ್ಲಿನ 32 ಸೌಹಾರ್ದ ಸಹಕಾರ ಸಂಘಗಳು ಒಂದೇ ಸೂರಿನಡಿ ಒಗ್ಗೂಡುವ ನಿಟ್ಟಿನಲ್ಲಿ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಎಂಡಿಸಿಸಿ ಬ್ಯಾಂಕ್‌ನ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಒಕ್ಕೂಟದ ಮೂಲಕ ಹೋರಾಟ ನಡೆಸಲಾಗುವುದು ಎಂದರು.
ಒಕ್ಕೂಟದ ಉಪಾಧ್ಯಕ್ಷ ಎಸ್.ಸಿದ್ದಲಿಂಗಯ್ಯ, ನಿರ್ದೇಶಕರಾದ ರಮೇಶ್, ವೆಂಕಟೇಶ್‌ಗೌಡ, ಎ.ಸಿ.ರಮೇಶ್, ದೊರೆಸ್ವಾಮಿ, ಸಿಇಒ ಪ್ರವೀಣ್ ಹಾಜರಿದ್ದರು.