

ಬೆಂಗಳೂರು: ಸೌಲಭ್ಯಗಳಿಂದ ವಂಚಿತರಾಗಿರುವ ಸುಡುಗಾಡು ಸಿದ್ಧರು ಹಾಗೂ ಕಾಡುಗೊಲ್ಲರನ್ನು ಒಂದು ವರ್ಗಕ್ಕೆ ಸೇರಿಸಿ, ಶೀಘ್ರವೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕೇಂದ್ರ ಸರ್ಕಾರ ತರಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಡಾ.ಸಿ. ಸೋಮಶೇಖರ್-ಎನ್. ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 'ಸಂಸ್ಕೃತಿ ಸಂಗಮ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಡುಗಾಡು ಸಿದ್ಧರು, ಕಾಡುಗೊಲ್ಲರು ಇಂದಿಗೂ ಸೀಮಿತ ಪ್ರದೇಶದಲ್ಲಿ ಉಳಿದುಕೊಂಡು ವಿಭಿನ್ನವಾಗಿ ಬದುಕು ಕಟ್ಟಿಕೊಂಡಿದ್ದಾರೆ. ನೈತಿಕ ವ್ಯವಸ್ಥೆಯಲ್ಲಿ ಅವರನ್ನು ಮೇಲ್ಪಂಕ್ತಿಗೆ ತರುವುದು ಕಷ್ಟಸಾಧ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದೇನೆ ಎಂದರು.
ಸಿದ್ಧಗಂಗಾ ಮಠವು ಬಡ ಮಕ್ಕಳಿಗೆ ಅನ್ನದಾಸೋಹ ಮಾತ್ರವಲ್ಲದೆ, ವಿದ್ಯಾದಾನ ಮಾಡುತ್ತಿದೆ. ಆದ್ದರಿಂದ ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ನಾಮಕರಣ ಮಾಡಿ, 90 ಕೋಟಿ ರೂ.ಗಳಲ್ಲಿ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಮಾತನಾಡಿ, ನಮ್ಮ ಸಮಾಜದ ಹೊಸ್ತಿಲ ಮೇಲೆ 'ಎಐ' (ಕೃತಕ ಬುದ್ಧಿಮತ್ತೆ) ಬಂದು ನಿಂತಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಈ ತಂತ್ರಜ್ಞಾನದ ಬಳಕೆಯ ಬಗ್ಗೆಯೂ ಚಿಂತಿಸಬೇಕಿದೆ. ಅಕ್ಷರ ಭವಿಷ್ಯದ ನೋಡುತ್ತ ಜ್ಞಾನ ಕಡೆಗೂ ಗಮನ ನೀಡಬೇಕಿದೆ. ವೈಜ್ಞಾನಿಕವಾಗಿ ಎಷ್ಟು ಮುಂದುವರಿಯಬಹುದು ಎಂಬುದನ್ನು 'ಎಐ' ಮೂಲಕ ತಿಳಿದುಕೊಳ್ಳಿ. ಆದರೆ ಸಾಹಿತ್ಯ ಜ್ಞಾನ ಓದಿನ ಮೂಲಕ ಸಿದ್ಧಿಸಿಕೊಳ್ಳಬೇಕು ಎಂದರು.
ನಮ್ಮ ಸಂಸ್ಕೃತಿ ಮತ್ತು ಮಾನವತೆ ಸಮತೋಲನವಾಗಿ ವಿಕಾಸಗೊಂಡಾಗ ನಾಡಿನಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ಮಾಡಲು ಸಾಧ್ಯವಿದೆ. ಇಂದು ನಾವೆಲ್ಲ ಧರ್ಮ, ಭಾಷೆ, ಗಡಿ ಹೋರಾಟಗಳಿಗಿಂತ ಹೆಚ್ಚಾಗಿ ಆದರ್ಶವಾದ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ, ನಾಡು ಕಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಕರೆ ನೀಡಿದರು.
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ದಾಸ ಸಾಹಿತ್ಯ), ಡಾ.ಬಸವರಾಜ ಸಬರದ (ವಚನ ಸಾಹಿತ್ಯ), ಡಾ.ಬಸವರಾಜ ನೆಲ್ಲಿಸರ (ಜಾನಪದ ಸಾಹಿತ್ಯ), ಡಾ.ಜಯದೇವಿ ಜಂಗಮಶೆಟ್ಟಿ (ಸಂಗೀತ ಕ್ಷೇತ್ರ) ಅವರಿಗೆ "ಸಂಸತಿ ಸಂಗಮ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮತ್ತಿತರರಿದ್ದರು.
ರೈಲ್ವೆ ಇಲಾಖೆಯಲ್ಲಿ 12 ಲಕ್ಷ ನೌಕರರಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಹೆಚ್ಚು ಅವಧಿಯ ಕೆಲಸ ಎಂಬ ಕಾರಣಕ್ಕೆ ರಾಜ್ಯದ ಅನೇಕ ಪ್ರತಿಭಾವಂತರು ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಈ ಮನೋಭಾವ ಹೋಗಲಾಡಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.
-ವಿ. ಸೋಮಣ್ಣ, ಕೇಂದ್ರ ಸಚಿವ