

ವಿಜಯವಾಣಿ ಸುದ್ದಿಜಾಲ ಉಡುಪಿ
ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರೋಪಿ ರನ್ಯಾ ರಾವ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳೇ ಎಸ್ಕಾರ್ಟ್ ಕೊಟ್ಟಿದ್ದಾರೆ. ಪ್ರೋಟೋಕಾಲ್ ವ್ಯವಸ್ಥೆ ಮಾಡಿ ತಪಾಸಣೆ ಇಲ್ಲದೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರೂ ಕೇಳಿಬರುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ತಮಿಳುನಾಡಿನಲ್ಲಿ ರೂಪಾಯಿ ಚಿಹ್ನೆ ನಿರಾಕರಿಸಿದ ಡಿಎಂಕೆ ಸಿಎಂ ಸ್ಟಾಲಿನ್ ಕ್ರಮ ದುರ್ದೈವವೇ ಸರಿ. ಅದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ರೂಪಾಯಿ ಸಿಂಬಲ್ ಮಾಡಿದ್ದು ಮೋದಿಯೇ? ಅದು ಬಿಜೆಪಿಯದ್ದೇ? ಆ ಚಿಹ್ನೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಿದ್ದಲ್ಲವೇ? ಕಾಂಗ್ರೆಸ್ನ ಚಿದಂಬರಂ ಆಗ ವಿತ್ತ ಸಚಿವರಾಗಿದ್ದರು. ಎ.ರಾಜಾ, ದಯಾನಿಧಿ ಮಾರನ್ ಸೇರಿದಂತೆ ಅನೇಕರು ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಯಾಕೆ ಈ ತೀಮಾರ್ನ ತೆಗೆದುಕೊಂಡಿದ್ದೆಂದು ಸ್ಪಷ್ಟಪಡಿಸಿ. ಕಾಂಗ್ರೆಸ್ ಮತ್ತು ಅವರ ಸ್ನೇಹಿ ಪಕ್ಷಗಳು ಕೀಳುಮಟ್ಟದ ರಾಜಕೀಯ ಮಾಡುತ್ತಿವೆ. ತಥಾಕಥಿತ ಇಂಡಿ ಘಟಬಂಧನ್ ಮಾಡೋದೇ ಹೀಗೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನ ಆಗದೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲ ವಿಚಾರ, ವಿಷಯವನ್ನು ಹೈಕಮಾಂಡ್ ಗಮನಿಸಿದೆ. ಅದನ್ನು ಸರಿ ಮಾಡುವ ಪ್ರಯತ್ನ ಒಂದು ವಾರದಿಂದ ಮುಂದುವರಿದಿದೆ. ಅದನ್ನು ನೀವೆಲ್ಲರೂ ಗಮನಿಸಿರುತ್ತೀರಿ ಎಂದು ಮಂದಹಾಸ ಬೀರಿದರು.
ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಘಟನೆಯಲ್ಲಿ ಭಾರತದ ಪ್ರಚೋದನೆಯ ಆರೋಪಕ್ಕೆ ಪ್ರತಿಕ್ರಿಯಿಸಿ ಸಚಿವ ಜೊಶೀ, ವಿದೇಶಾಂಗ ಸಚಿವಾಲಯ ಈಗಾಗಲೇ ಸುದೀರ್ಘ ಉತ್ತರ ಕೊಟ್ಟಿದೆ. ಪಾಕಿಸ್ತಾನದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದೆ. ಅಲ್ಲಿ ವಿದೇಶಿಯರು, ರಾಜತಾಂತ್ರಿಕರು ಹೋಗಲು ಭಯಪಡುವ ಪರಿಸ್ಥಿತಿ ಇದೆ. ಆ ಘಟನೆಯಲ್ಲಿ ಭಾರತವನ್ನು ದೂಷಿಸುವುದು ಅತ್ಯಂತ ಬಾಲಿಷತನ. ಜಗತ್ತಿನಲ್ಲಿ ಎಲ್ಲಿಯೂ ಅಶಾಂತಿ ಇರಬಾರದು ಅನ್ನುವುದು ಭಾರತದ ಧೋರಣೆಯಾಗಿದೆ ಎಂದರು.