ರಾಷ್ಟ್ರ ನಿರ್ಮಾಣದ ತತ್ವಾದರ್ಶಕ್ಕೆ ಮೂಲಾಧಾರ ‘ಏಕತೆ‘: ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಸುಕಾಂತ ಮಜುಂದಾರ್ ಅಭಿಮತ

7
Published on

ಮೈಸೂರು: ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಕೇವಲ ಐತಿಹಾಸಿಕ-ಸಾಂಸ್ಕೃತಿಕ ಪರಂಪರೆಯ ಭಾಗವಾಗಿರದೆ ರಾಷ್ಟ್ರ ನಿರ್ಮಾಣದ ತತ್ವಾದರ್ಶಕ್ಕೆ ಮೂಲಾಧಾರವಾಗಿದೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಸುಕಾಂತ ಮಜುಂದಾರ್ ಅಭಿಪ್ರಾಯಪಟ್ಟರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತ ಒಂದು ಭಾಷಿಕ ಕ್ಷೇತ್ರ: ಅಂತರ ಶಿಸ್ತೀಯ ನೋಟ’ ಕುರಿತ ಸಮ್ಮೇಳನದಲ್ಲಿ ಆನ್‌ಲೈನ್ ಮೂಲಕ ಅವರು ಮಾತನಾಡಿದರು.

ಭಾರತೀಯರು ಒಂದು ಶತಮಾನದ ಜೀವನ ಶೈಲಿಯನ್ನು ಗಮನಿಸಿದರೆ, ಅದು ಸಾವಿರಾರು ವರ್ಷಗಳ ಹಿಂದಿನಿಂದ ಆಚರಿಸಿಕೊಂಡು ಬಂದ ಆಚಾರ-ವಿಚಾರ, ಸಂಸ್ಕೃತಿ, ಪರಂಪರೆಯ ಬೇರುಗಳು ಗೋಚರಿಸುತ್ತವೆ ಎಂದರು.

ಹೀಗಾಗಿ ಭಾಷೆ ಮತ್ತು ಅದನ್ನು ಅನುಸರಿಸುವ ಸಮುದಾಯದ ಆಚಾರ, ವಿಚಾರಗಳ ನಡುವೆ ಹೆಚ್ಚು ಸಂಬಂಧವಿದೆ. ಇದು ಭಾರತದ ಸಂಸ್ಕೃತಿ, ಪರಂಪರೆಯು ಪ್ರಚಲಿತದಲ್ಲಿರುವ ಭಾಷೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ ಎಂದು ಬಣ್ಣಿಸಿದರು.

ಭಾರತ ಬಹುಭಾಷೆಯ ದೇಶವಾಗಿದ್ದು, ಸಮಾಜದ ಪ್ರತಿಯೊಂದು ಪಂಗಡವೂ ಒಂದೊಂದು ಧರ್ಮ, ಭಾಷೆ, ಕಲೆ, ಸಂಸ್ಕೃತಿ ಹೊಂದಿದೆ. ಆದರೂ ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ನಾವು ನೋಡಲು ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಭಾಷೆಗಳ ಅಧ್ಯಯನಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ನಮ್ಮ ದೇಶ ಸಾಂಸ್ಕೃತಿಕ, ಸಾಮಾಜಿಕ, ಭಾಷಾ ಮತ್ತು ಧಾರ್ಮಿಕ ಆಚರಣೆಗಳನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಇಲ್ಲಿನ ಆಚರಣೆಗಳು, ಸಾಮಾಜಿಕ ರಚನೆಗಳು, ಧಾರ್ಮಿಕ ನಂಬಿಕೆಗಳು ಮತ್ತು ಇತಿಹಾಸವೇ ಕಾರಣವಾಗಿದೆ. ಹಾಗಾಗಿಯೇ ನಮ್ಮ ದೇಶವನ್ನು ಒಂದು ಮಾನವಶಾಸ್ತ್ರೀಯ-ಸಾಮಾಜಿಕ ಕ್ಷೇತ್ರವೆಂದು ಪರಿಗಣಿಸಬಹುದಾಗಿದೆ ಎಂದರು.

ವೇದಗಳ ಕಾಲದಿಂದಲೂ ಇದು ಹಾಸುಹೊಕ್ಕಾಗಿದೆ. ಹಿಂದೆ ಶಿಕ್ಷಾ, ವ್ಯಾಕರಣ, ನಿರುಕ್ತಾ, ಛಂದಸ್ಸು ಎಂಬುದಾಗಿ ಅಧ್ಯಯನ ಮಾಡಲಾಗುತ್ತಿತ್ತು. ಈ ರೀತಿಯ ವೈಜ್ಞಾನಿಕ ಅಧ್ಯಯನಗಳು ಆಧುನಿಕ ಭಾಷೆಗಳ ಸಿದ್ಧಾಂತಗಳ ಮೇಲೆ ಪ್ರಭಾವ ಬೀರುತ್ತವೆ. ಅಂತೆಯೆ ವೇದಗಳ ಕಾಲದಲ್ಲಿ ಬಳಕೆಯಾಗಿರುವ ಭಾಷೆಯೂ ಭಾಷಾಶಾಸ್ತ್ರಜ್ಞರಿಗೆ ಅಧ್ಯಯನ ಮಾಡಲು ಲಭ್ಯವಿರುವ ಒಂದು ಉತ್ತಮ ಸಂಪನ್ಮೂಲವಾಗಿದೆ ಎಂದು ಹೇಳಿದರು.

ಭಾರತದಲ್ಲಿ ನಾನಾ ಭಾಷಾ ಸಮುದಾಯಗಳ ವಿಸ್ತರಣೆ, ವಲಸೆ ಮತ್ತು ಬದಲಾಗುತ್ತಿರುವ ಭಾಷಾ ಮಾದರಿಗಳ ದೀರ್ಘ ಇತಿಹಾಸವನ್ನು ಕಾಣುತ್ತೇವೆ. ಈ ಸನ್ನಿವೇಶವು ಸ್ವಾಭಾವಿಕವಾಗಿಯೇ ದೇಶದ ಸಾಮಾಜಿಕ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಏಕತೆಗೆ ಕಾರಣವಾಗಿದೆ ಎಂದರು.

ಈ ವೈವಿಧ್ಯತೆಯಲ್ಲಿನ ಏಕತೆ ಪ್ರಕ್ರಿಯೆಯೂ ಕಾಮನಬಿಲ್ಲಿನಂತೆ ಭಾಷೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಅಲ್ಲದೆ ಭಾರತೀಯ ಸಾಂಸ್ಕೃತಿಕ ನೀತಿಯನ್ನು ಸೃಷ್ಟಿಸಿವೆ. ಮಾತ್ರವಲ್ಲದೆ ಭಾರತೀಯ ಭಾಷೆಗಳನ್ನಾಡುವವರು ನೂರಾರು ವರ್ಷಗಳಿಂದ ಒಟ್ಟಿಗೆ ಇರುವುದರಿಂದಲೇ ಅವರ ಭಾಷೆಯಲ್ಲಿಯೂ ಸಾಕಷ್ಟು ಹೋಲಿಕೆಗಳಿವೆ ಎಂದರು.

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, ಭಾರತದಲ್ಲಿ ಆಳವಾಗಿ ಬೇರೂರಿರುವ ನಾಗರಿಕತೆಯ ಐಕ್ಯತೆಯು ಭಾಷೆ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಮೀರಿದೆ ಎಂದು ಹೇಳಿದರು.

ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮತ್ತು ವಿವೇಕಾನಂದ ಕೇಂದ್ರದ ಉಪಾಧ್ಯಕ್ಷೆ ನಿವೇದಿತಾ ಭಿಡೆ ಮಾತನಾಡಿ, ಭಾರತದಲ್ಲಿ ಭಾಷೆಗಳ ನಡುವೆ ಸಾಮರಸ್ಯ ಇದ್ದು, ಒಂದಕ್ಕೊಂದು ಸಂಬಂಧ ಹೊಂದಿವೆ. ಭಾಷೆಗಳ ಮೂಲಕ ನಮ್ಮ ಆಲೋಚನೆಗಳು ಹಂಚಿಕೆ ಆಗುತ್ತವೆ. ಅದು ನಮ್ಮ ನೋಟದಿಂದ ಬರುತ್ತದೆ. ಆದ್ದರಿಂದ ಕಲಿಕೆಯ ವಿಚಾರದಲ್ಲಿ ಯಾವ ಭಾಷೆಯೂ ಕಠಿಣ ಅಲ್ಲ ಎಂದರು.

ಪ್ರತಿ 50-60 ಕಿ.ಮೀ.ಗೆ ಭಾಷೆಯಲ್ಲಿ ವ್ಯತ್ಯಾಸ ಆಗುತ್ತದೆ. ಬಹುತೇಕ ಭಾಷೆಗಳಲ್ಲಿ ಪಂಚ ಮಹಾಭೂತ, ವಾಯು, ಆಕಾಶದಂತಹ ಸಾಮಾನ್ಯ ಪದಗಳು ಬಳಕೆಯಲ್ಲಿವೆ. ಸಾಮಾನ್ಯ ಬಳಕೆಯ ಪದಗಳು ಬಹುತೇಕ ಭಾಷೆಗಳಲ್ಲಿ ಒಂದೇ ರೀತಿ ಇವೆ. ಹೀಗಾಗಿ ಭಾಷೆಗಳಲ್ಲಿನ ಮೌಲ್ಯಗಳು ಒಂದೇ ಆಗಿವೆ. ಪ್ರಕೃತಿ, ಮಾನವೀಯ ಮೌಲ್ಯ, ದೇವರ ವಿಷಯದಲ್ಲಿ ನಾವು ಬೆಸೆದುಕೊಂಡಿದ್ದೇವೆ. ಸಂಪ್ರದಾಯ, ಆಚಾರ-ವಿಚಾರಗಳು ಭಿನ್ನ ಎನಿಸಿದರೂ ಆಂತರ್ಯದಲ್ಲಿ ಒಂದೇ ಬಗೆ ಆಗಿವೆ ಎಂದರು.

ಭಾಷಾ ಸಂಸ್ಥಾನದ ನಿರ್ದೇಶಕ ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಪಂಕಜ್ ದ್ವಿವೇದಿ, ಡಾ.ಸುಜಯ್ ಸರ್ಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net