

ಮಂಡ್ಯ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಸದುದ್ದೇಶದೊಂದಿಗೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ನಗರದಲ್ಲಿ ನಡೆಸಿದ ಜನತಾದರ್ಶನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಂಡ್ಯ, ಮೈಸೂರು, ರಾಮನಗರ ಜಿಲ್ಲೆ ಸೇರಿದಂತೆ ಹಲವೆಡೆಯಿಂದ ಜನಸಾಗರವೇ ಹರಿದುಬಂತು.
ಆದರೆ ರಾಜ್ಯಸರ್ಕಾರ ‘ಜನತಾದರ್ಶನ’ದಲ್ಲಿ ಭಾಗವಹಿಸದಂತೆ ಕಟ್ಟಪ್ಪಣೆ ಹೊರಡಿಸಿದ ಪರಿಣಾಮ ಅಧಿಕಾರಿಗಳು ಗೈರಾದರು. ಇನ್ನು ಈ ಆದೇಶ ಟೀಕೆಗೆ ಗುರಿಯಾಗಿದೆ. ಜನರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಹೋಗದಂತೆ ಸೂಚನೆ ಹೊರಡಿಸಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಜನತಾದರ್ಶನದಲ್ಲಿ ವ್ಯಕ್ತವಾಯಿತು. ಮಾತ್ರವಲ್ಲದೆ ವಿವಿಧೆಡೆಯಿಂದ ಆಗಮಿಸಿದ ಜನರು ರಾಜ್ಯಸರ್ಕಾರದ ಆದೇಶಕ್ಕೆ ಆಕ್ರೋಶ ಹೊರಹಾಕಿದರು.
ಸಂಸದ ಅಥವಾ ಕೇಂದ್ರ ಸಚಿವರೊಬ್ಬರು ಜಿಲ್ಲಾಮಟ್ಟದಲ್ಲಿ ಜನತಾದರ್ಶನ ನಡೆಸುವ ವಿಭಿನ್ನ ಪ್ರಯತ್ನಕ್ಕೆ ಎಚ್‌ಡಿಕೆ ಮುಂದಾದರು. ಅದಕ್ಕೆ ತಕ್ಕಂತೆ ತಮ್ಮ ನೋವನ್ನು ಹೇಳಿಕೊಳ್ಳಲು ಬೆಳಗ್ಗೆಯಿಂದಲೇ ಜನರು ಅರ್ಜಿ ಹಿಡಿದು ಕಾದು ಕುಳಿತರು. ಮೊದಲ ಬಾರಿಗೆ ನಡೆದ ಜನತಾದರ್ಶನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಜನರ ಮನವಿ ಸ್ವೀಕರಿಸಲು ಇಲಾಖಾವಾರು ಮಳಿಗೆ ತೆರೆಯಲಾಗಿತ್ತು. ಅದರಂತೆ ಟೋಕನ್ ನೀಡಿ, ಸಂಖ್ಯೆಗೆ ಅನುಗುಣವಾಗಿ ಎಚ್‌ಡಿಕೆ ಎದುರು ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು.
ಆದರೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಪ್ರಾರಂಭದಿಂದಲೇ ಗೊಂದಲವಾಯಿತು. ಜನರು ಸರತಿ ಸಾಲಿನಲ್ಲಿ ಹೋಗಿ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಮಾತ್ರವಲ್ಲದೆ ನೂಕುನುಗ್ಗಲು ಉಂಟಾಯಿತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಇದಲ್ಲದೆ ರಾಜ್ಯಸರ್ಕಾರದ ಸೂಚನೆಯಂತೆ ಅಧಿಕಾರಿಗಳು ಭಾಗವಹಿಸಲಿಲ್ಲ. ಆದಾಗ್ಯೂ ಎಚ್.ಡಿ.ಕುಮಾರಸ್ವಾಮಿ ಅವರು ದಿನವಿಡೀ ಸಮಾಧಾನದಿಂದಲೇ ಜನರ ಮನವಿ ಆಲಿಸಿದರು. ಮಧ್ಯಾಹ್ನ ಕೂಡ ಊಟ ಮಾಡುತ್ತಲೇ ಅರ್ಜಿ ಸ್ವೀಕರಿಸಿದರು. ಇನ್ನು ಅಹವಾಲು ಸಲ್ಲಿಸಲು ಬಂದು ವೇದಿಕೆಯ ಎದುರಿನ ಕೆಳಭಾಗದಲ್ಲಿ ಅಂಗವಿಕಲರು ನಿಂತಿದ್ದರು. ಎಚ್‌ಡಿಕೆ ಅಂಗವಿಕಲರಲ್ಲಿದ್ದ ಕಡೆಗೆ ಬಂದು ಮನವಿ ಸ್ವೀಕರಿಸಿದರು. ವಿವಿಧೆಡೆಯಿಂದ ಆಗಮಿಸಿದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮೊದಲು ಎಚ್‌ಡಿಕೆ ಅವರು ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮಂಡ್ಯ ನಗರಕ್ಕೆ ಆಗಮಿಸಿ ಶಕ್ತಿದೇವತೆ ಕಾಳಿಕಾಂಭ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸಿಎಂ, ಡಿಸಿಎಂ, ಸಚಿವರಿಗಷ್ಟೇ ಅವಕಾಶವಂತೆ
ಕಾರ್ಯಕ್ರಮದ ಆರಂಭದಲ್ಲೇ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜನತಾದರ್ಶನಕ್ಕೆ ರಾಜ್ಯಸರ್ಕಾರ ನಿರ್ಬಂಧ ವಿಧಿಸಿದೆ. ದೆಹಲಿ ಮಟ್ಟದಲ್ಲಿ ಬಿಡುವಿಲ್ಲದ ಕಾರ್ಯಕ್ರಮ ಇವೆ. ಎರಡು ಪ್ರಮುಖ ಖಾತೆಗಳನ್ನ ಕೊಡಲಾಗಿದೆ. ಮತ ಕೊಟ್ಟು ಆಶೀರ್ವಾದ ಮಾಡಿದ ಜನ ನೀವು. ಆದ್ದರಿಂದ ನಿಮ್ಮ ಕಷ್ಟ ಆಲಿಸಲು ಬಂದಿದ್ದೇನೆ. ಆದರೆ ಜನತಾದರ್ಶನದಲ್ಲಿ ಭಾಗಿಯಾಗದಂತೆ ಅಧಿಕಾರಿಗಳಿಗೆ ರಾಜ್ಯಸರ್ಕಾರ ಸೂಚನೆ ಕೊಟ್ಟಿದೆ. ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರದೇ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ ಎಂದರು.
ಇದು ಸರ್ಕಾರದ ಅಧಿಕೃತ ಕಾರ್ಯಕ್ರಮ ಅಲ್ಲ. ನಾನು ಜನತಾದರ್ಶನ ಮಾಡಬೇಕು ಎಂದು ತೀರ್ಮಾನ ಮಾಡಿದೆ. ಆ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೆ. ಆದರೆ ನಿನ್ನೆ ಸರ್ಕಾರ ಒಂದು ಸುತ್ತೋಲೆ ಹೊರಡಿಸಿದೆ. ಜನತಾದರ್ಶನ ಮಾಡುವುದಕ್ಕೆ ಸಿಎಂ, ಡಿಸಿಎಂ ಹಾಗೂ ರಾಜ್ಯ ಸರ್ಕಾರದ ಸಚಿವರಿಗೆ ಮಾತ್ರ ಅವಕಾಶವಂತೆ. ಬೇರೆಯವರ ಜನತಾದರ್ಶನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಸರ್ಕಾರದ ಸಣ್ಣತನದಿಂದ ಅಧಿಕಾರಿಗಳನ್ನು ಇಲ್ಲಿಗೆ ಬರದಂತೆ ಮಾಡಿದೆ. ಇದು ನನ್ನ ಮನೆ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮ ಅಲ್ಲ. ಕಾರ್ಯಕರ್ತರು, ಮತದಾರರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಮಾಜಿ ಸಚಿವರು, ಶಾಸಕರು ಇಲ್ಲೇ ಇದ್ದು ಜನರ ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದು ಹೇಳಿದರು.