

ಮಂಡ್ಯ: ಲೋಕಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಅಭಿಮಾನವಿಟ್ಟು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಅವರ ಕಷ್ಟವನ್ನು ಆಲಿಸುವುದು ನನ್ನ ಕರ್ತವ್ಯ. ಅಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ನನಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವನಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆ ದೊರೆತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನತಾದರ್ಶನ ಉದ್ಘಾಟಿಸಿ, ಅಂಬೇಡ್ಕರ್ ಹಾಗೂ ಮಹಾತ್ಮಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಪ್ರಗತಿಗೆ ಒತ್ತು ನೀಡುವುದರ ಜತೆಗೆ ರಾಜ್ಯ ಹಾಗೂ ದೇಶದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಠಿಸುವ ಕಾರ್ಯದಲ್ಲಿ ಮುಂದಡಿ ಇಡುತ್ತೇನೆ. ವಿಶೇಷವಾಗಿ ಯುವಜನರು, ಮಹಿಳೆಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ ಎಂದರು.
ಇದೇ ವೇಳೆ ಹೂವಿನ ಹಾಕ ಹಾಕಲು ನೂಕುನುಗ್ಗಲಿನಲ್ಲಿ ಕಾರ್ಯಕರ್ತರು ವೇದಿಕೆಗೆ ಬರುತ್ತಿದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವ ಎಚ್‌ಡಿಕೆ, ನಾನು ಹಾರ ಹಾಕಿಸಿಕೊಳ್ಳಲು ಜಿಲ್ಲೆಗೆ ಆಗಮಿಸುವುದಿಲ್ಲ. ಸಂಕಷ್ಟದಲ್ಲಿರುವ ಜನಸಾಮಾನ್ಯರ ಸಮಸ್ಯೆ ಆಲಿಸಿ ನೆರವಾಗುವುದು ನನ್ನ ಉದ್ದೇಶ. ಮುಖಂಡರು ಹಾಗೂ ಕಾರ್ಯಕರ್ತರ ಮಾತನ್ನು ಕೇಳುತ್ತೇನೆ. ಅದಕ್ಕೂ ಮೊದಲು ಜನರ ಸಮಸ್ಯೆಯನ್ನು ಕೇಳಬೇಕು. ಇನ್ನು ಇದು ಸರ್ಕಾರಿ ಕಾರ್ಯಕ್ರಮವಲ್ಲದ ಕಾರಣ ಪಕ್ಷದ ಮಾಜಿ ಸಚಿವರು ಮತ್ತು ಶಾಸಕರು ವೇದಿಕೆ ಬರಬಹುದು. ಕಾರಣ, ನಿಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇಳುವಾಗ ನಿಮಗೂ ಮಾಹಿತಿ ಇರಬೇಕು ಎಂದು ಹೇಳಿದರು.
ಕೇಂದ್ರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಎಂಎಲ್‌ಸಿ ವಿವೇಕಾನಂದ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಯುವ ಮುಖಂಡ ಬಿ.ಆರ್.ಸುರೇಶ್ ಇತರರಿದ್ದರು.
ಸಮಸ್ಯೆ ಹೇಳಿಕೊಳ್ಳಲು ಕಾರ್ಯಕರ್ತರ ಅಡ್ಡಿ
ಜನತಾ ದರ್ಶನದಲ್ಲಿ ಭಾಗಿಯಾಗಿದ್ದ ಸಾವಿರಾರು ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಂಡ್ಯ, ಮೈಸೂರು, ರಾಮನಗರ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದರು. ಆದರೆ ಜನತಾದರ್ಶನಕ್ಕೆ ಅಗತ್ಯ ಸಿದ್ಧತೆ ಹಾಗೂ ವೇದಿಕೆ ಮೇಲೆ ಜೆಡಿಎಸ್ ಕಾರ್ಯಕರ್ತರೇ ತುಂಬಿಕೊಂಡಿದ್ದ ಕಾರಣ ಸಮಸ್ಯೆ ಹೇಳಿಕೊಳ್ಳಲು ಅಡ್ಡಿಯಾಗುವಂತಾಯಿತು.
ಸಚಿವ ಎಚ್‌ಡಿಕೆ ನಗರದಲ್ಲಿ ನಡೆಸಿದ ಪ್ರಥಮ ಜನತಾ ದರ್ಶನದಲ್ಲಿ ನಿರೀಕ್ಷೆಗೂ ಮೀರಿ ಜನರು ಆಗಮಿಸಿದರು. ಬೆಳಗ್ಗೆ 8 ಗಂಟೆಯಿಂದಲೇ ನಾಗರಿಕರು, ಅಂಗವಿಕಲರು ಆಗಮಿಸಿ ಕೇಂದ್ರ ಸಚಿವರ ಆಗಮನಕ್ಕೆ ಕಾದು ಕುಳಿತ್ತಿದ್ದರು. ಇನ್ನು ತಮ್ಮ ಅಹವಾಲನ್ನು ಸಲ್ಲಿಸಲು ಆಗಮಿಸಿದ್ದ ಜನರಿಗೆ ಅನುಕೂಲವಾಗಲೆಂದು ಜರ್ಮನ್ ಟೆಂಟ್ ಶಾಮಿಯಾನ, ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂಬೇಡ್ಕರ್ ಭವನದ ಒಳಾಂಗಣ ಹಾಗೂ ಹೊರ ವಲಯದಲ್ಲಿ ಸುಮಾರು 10 ಕೌಂಟರ್‌ಗಳನ್ನು ತೆರೆದು ಅಹವಾಲು ಅರ್ಜಿ ಸ್ವೀಕರಿಸಲಾಗಿತ್ತು.
ಸುಮಾರು 12ಗಂಟೆಗೆ ಆಗಮಿಸಿದ ಎಚ್‌ಡಿಕೆ ವೇದಿಕೆ ಏರಿದರು. ಈ ವೇಳೆ ಮಾಜಿ ಸಚಿವರು ಹಾಗೂ ಶಾಸಕರನ್ನು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಪರಿಣಾಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಗುಂಪು ವೇದಿಕೆ ಏರಿ ಜನಸಾಗರವಾಯಿತು. ಸಂಕಷ್ಟ ಹೇಳಿಕೊಳ್ಳಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನರಿಗೆ ಕಾರ್ಯಕರ್ತರು ಮತ್ತು ಮುಖಂಡರ ವರ್ತನೆ ಬೇಸರ ತರಿಸಿತು. ಇದನ್ನು ಅರಿತ ಕುಮಾರಸ್ವಾಮಿ ಅವರು ಪ್ರೀತಿಯಿಂದಲೇ ಕಾರ್ಯಕರ್ತರನ್ನು ಗದರಿ ವೇದಿಕೆಯಿಂದ ನಿರ್ಗಮಿಸಿ ಜನರ ಅಹವಾಲು ಆಲಿಸಲು ಮಾಡಿಕೊಂಡ ಮನವಿಗೆ ಕಾರ್ಯಕರ್ತರು ಕ್ಯಾರೇ ಎನ್ನಲಿಲ್ಲ.
ಈ ನಡುವೆಯೇ ಜನತಾದರ್ಶನದಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಅಂಗವಿಕಲರ ಬಳಿ ಖುದ್ದು ತೆರಳಿದ ಕುಮಾರಸ್ವಾಮಿ ಅವರು, ಸಾವಧಾನದಿಂದ ಅವರ ಸಮಸ್ಯೆ ಆಲಿಸಿ ಸುಮಾರು 1 ಗಂಟೆ ಕಾಲ ಅವರೊಂದಿಗೆ ಕಾಲ ಕಳೆದರು. ತರುವಾಯ ವೇದಿಕೆ ಏರಿ ಸಾಲಾಗಿ ಬಂದು ತಮ್ಮ ದುಮ್ಮಾನ ಹೇಳಿಕೊಳ್ಳುವಂತೆ ಪದೇ ಪದೇ ಮನವಿ ಮಾಡಿದರೂ, ಪಕ್ಷದ ಕಾರ್ಯಕರ್ತರ ಓಡಾಟ ಹಾಗೂ ಜನಸಾಮಾನ್ಯರ ನೂಕು-ನುಗ್ಗಲಿನಿಂದ ಜನತಾದರ್ಶನದಲ್ಲಿ ಗೊಂದಲ ಸೃಷ್ಠಿಯಾಯಿತು. ಇನ್ನೊಂದೆಡೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಮಾತ್ರವಲ್ಲದೆ ಕೆಲವೊಮ್ಮೆ ಮಾತಿನ ಚಕಮಕಿಯೂ ನಡೆಯಿತು. ಈ ನಡುವೆ ಯುವ ಘಟಕದ ಅಧ್ಯಕ್ಷ ಹಾಗೂ ನಟ ನಿಖಿಲ್ಕುಮಾರಸ್ವಾಮಿ ಅವರೊಂದಿಗೆ ಪೋಟೋ ತೆಗೆಸಿಕೊಳ್ಳುವ ಸಂಭ್ರಮಕ್ಕೆ ಮುಗಿಬಿದ್ದರು.
ಎಚ್‌ಡಿಕೆ ಅಂದ್ರೆ ಪ್ರೀತಿ ಎಂದ ರವೀಂದ್ರ ಶ್ರೀಕಂಠಯ್ಯ
ತಮ್ಮ ನೋವನ್ನು ಹೇಳಿಕೊಳ್ಳಲು ಆಗಮಿಸಿದ ಜನರನ್ನು ಬ್ಯಾರಿಕೇಡ್ ಹಾಕಿ ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು.
ಭವನದ ಹಿಂದಿನ ದ್ವಾರದಿಂದ ಎಚ್‌ಡಿಕೆ ಆಗಮಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮಾಜಿ ಶಾಸಕರು ಸ್ಥಳದಲ್ಲಿಯೇ ಇದ್ದರು. ಈ ಸಮಯದಲ್ಲಿ ಜನರು ಒಳಗೆ ಬರಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಇದಕ್ಕೆ ಆಕ್ಷೇಪಿಸಿದ ರವೀಂದ್ರ ಶ್ರೀಕಂಠಯ್ಯ, ಸಮಸ್ಯೆ ಹೇಳಲು ಬಂದಿರುವ ಜನರನ್ನು ತಡೆಯಬೇಡಿ. ಎಚ್.ಡಿ.ಕುಮಾರಸ್ವಾಮಿ ಅಂದರೆ ಜನರಿಗೆ ಪ್ರೀತಿ. ಆದ್ದರಿಂದ ಅವರ ಬಳಿ ಮಾತನಾಡಲು ದೂರದಿಂದ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಡೆದರೆ ಎಚ್‌ಡಿಕೆ ಬದಲಾಗಿದ್ದಾರೆಂದು ಬೇಸರಿಸಿಕೊಳ್ಳುತ್ತಾರೆ. ಅಂತಹ ಕೆಲಸ ಮಾಡಬೇಡಿ ಎಂದು ಹೇಳುವ ಮೂಲಕ ಜನರು ಬರಲು ಅವಕಾಶ ಕಲ್ಪಿಸಿದರು.
ಇದಲ್ಲದೆ ರವೀಂದ್ರ ಶ್ರೀಕಂಠಯ್ಯ ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಕಟೌಟ್‌ಗಳನ್ನು ಹಾಕಿ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ ನೀಡಿದರು. ನಗರ ವ್ಯಾಪ್ತಿಯ ಎಂ.ಸಿ.ರಸ್ತೆಯುದ್ದಕ್ಕೂ ಹಾಗೂ ಪ್ರಮುಖ ರಸ್ತೆಗಳಲ್ಲಿ ’ಮತದಾರರ ಸಂಪರ್ಕ, ನಮ್ಮ ಸಂಕಲ್ಪ’ ಎಂಬ ಘೋಷ ವಾಕ್ಯ ಸಾರುವ ಮತ್ತು ಕುಮಾರಸ್ವಾಮಿ ಅವರ ಆಳೆತ್ತರದ ಪ್ಲೆಕ್ಸ್ ಅಳವಡಿಸಿದರು. ಜತೆಗೆ ಜನತಾದರ್ಶನ ನಡೆಯುವ ವೇಳೆಯೂ ಕುಮಾರಸ್ವಾಮಿ ಅವರೊಂದಿಗೆ ಸೇರಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ನೆರವಾದರು.