ದೇಶಕ್ಕೆ ಬುದ್ದಿ ಹೇಳ್ತಾರೆ, ಕೆಐಎಡಿಬಿ ಜಾಗನೇ ಬೇಕಿತ್ತಾ?: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

hdk
Published on

ಮಂಡ್ಯ: ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ದೇಶಕ್ಕೆ ಬುದ್ದಿ ಹೇಳುತ್ತಾರೆ. ದುಡ್ಡು ಕೊಟ್ಟು ಖಾಸಗಿ ಜಮೀನು ಖರೀದಿಸಲು ಆಗುತ್ತಿರಲಿಲ್ಲವಾ. ಕೆಐಎಡಿಬಿ ಜಾಗನೇ ಬೇಕಿತ್ತಾ. ಇದು ಅಧಿಕಾರ ದುರಪಯೋಗ ಅಲ್ವಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಕೆಐಎಡಿಬಿ ನಿವೇಶನ ಹಂಚಿಕೆ ಪ್ರಕರಣದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಕಾದಷ್ಟು ಇಂತಹ ಪ್ರಕರಣ ನಡೆದಿದೆ. ಖರ್ಗೆ ಅವರು ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಜಮೀನು ತೆಗೆದುಕೊಂಡಿದ್ದಾರೆ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಹೇಳಿದರು.

ಕಾಂಗ್ರೆಸ್‌ನಿಂದ ರಾಜಭವನ ಚಲೋ ಮಾಡುತಿರುವುದು ಬಹಳ ಸಂತೋಷ. ರಾಜಭವನದ ಜತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಮನೆಗೆ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ. ಎಲ್ಲ ಅನುಮತಿ ನಡೆದು ತನಿಖೆ ಮಾಡಿ ಎಂದು ಸವಾಲು ಹಾಕಿದರು.

ಮೈಸೂರು ಮುಡಾ ಹಗರಣದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಹಾಕದೇ ನೋಡದೆ ಇದ್ದರೂ ಅಷ್ಟೇ. ಅದು ಸರ್ಕಾರಿ ಭೂಮಿ. ನನ್ನ ಮೇಲೆ ಲಘುವಾಗಿ ಮಾತನಾಡಿದ್ದಾರೆ. ಆದರೆ ಸರ್ಕಾರಿ ಭೂಮಿ ಲಪಟಾಯಿಸಿ ಹದಿನೈದು ಸೈಟ್ ಪಡೆದಿದ್ದಾರೆ. ಇದಕ್ಕೆ ಮೊದಲು ಸಿಎಂ ಉತ್ತರ ಕೊಡಲಿ. ಕಾನೂನು ಪ್ರಕಾರ ಸೈಟ್ ಬೇಕಾದರೆ ಪಡೆಯಿರಿ. ಇದಕ್ಕೆ ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಠಿ ಮಾಡಿ, ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಾಮಾನ್ಯ ರೈತ ಖಾತೆ ಮಾಡಲು ಹೇಳಿದರೆ ಮಾಡುತ್ತೀರಾ?. ಭೂ ಪರಿವರ್ತನೆ ಮಾಡಿದ್ದೀರಿ ಅಲ್ವಾ, ಅದು ಯಾರ ಭೂಮಿ. ಆ ವ್ಯಕ್ತಿ ಸತ್ತು 25 ವರ್ಷ ಆಗಿದೆ. ಸತ್ತಿರುವ ವ್ಯಕ್ತಿಯ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದೀರಿ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ ಮಾಡಿಸಿದ್ದು ಯಾರು. ಇನ್ನೊಬ್ಬ ಮಗ ಇದ್ದನ್ನಲ್ಲ, ಅವರು ಹೇಳಿ ಮಾಡಿಸಿದ್ದರು ಎಂದು ದಿ.ರಾಕೇಶ್ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದರು.

ಡಿಸಿಎಂ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಎಚ್‌ಡಿಕೆ, ಚರ್ಚೆ ಮಾಡಲು ಬಹಳ ವಿಚಾರಗಳು ಇವೆ. ಪಾಪ ನಮ್ಮನ್ನ ಕೆದಕಿದ್ದಾರೆ. ನಿನ್ನೆ ಅಸಲಿ-ನಕಲಿ ಎಂದು ಹೇಳಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿನೋಟಿಫಿಕೇಷನ್ ಮಾಡಿಕೊಂಡು ಜೀವನ ಮಾಡುವವರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇದೀಯಾ. ಮಂತ್ರಿಗಳ ಲೇಟರ್ ಪ್ಯಾಡ್‌ನಲ್ಲಿ ಎಷ್ಟು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net