

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರವೂ ಸೇರಿದಂತೆ ರಾಜ್ಯದ ನಿರುದ್ಯೋಗಿ ಯುವಜನರಿಗೆ ಕೌಶಲಾಧಾರಿತ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದರು.
ಮುಖ್ಯವಾಗಿ ಶೇ.80ರಷ್ಟು ಕೃಷಿಯನ್ನೇ ನಂಬಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಕೌಶಲ ತರಬೇತಿ, ಉದ್ಯೋಗ ಅವಕಾಶಗಳ ಬಗ್ಗೆ ಸಚಿವರು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ವಿಸ್ತೃತ ಸಮಾಲೋಚನೆ ನಡೆಸಿದರು. ಬೆಂಗಳೂರಿನ ಎಚ್‌ಎಂಟಿ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಮುಖವಾಗಿ ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಮುಂತಾದ ವಿಭಾಗಗಳಲ್ಲಿ ಉತ್ತೀರ್ಣರಾಗಿರುವ ಯುವಜನರಿಗೆ ಅವರವರ ಕುಶಲತೆಗೆ ತಕ್ಕಂತೆ ಉದ್ಯೋಗ ಕಲ್ಪಿಸಬೇಕು. ಅಗತ್ಯವಾಗಿ ನಾವು ಅಪ್ರೆಂಟೀಸ್ ಮೇಳ ಮಾಡಿದರೆ ಉತ್ತಮ ಎಂದು ಹೇಳಿದರು.
ಅರ್ಹ ಅಭ್ಯರ್ಥಿಗಳಿಗೆ ಲಭ್ಯವಿರುವ ಉದ್ಯೋಗಗಳಿಗೆ ಅನುಗುಣವಾಗಿ, ಉದ್ಯೋಗ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಕೌಶಲ ತರಬೇತಿ ನೀಡುವ ಬಗ್ಗೆ ಕೌಶಲಾಭಿವೃದ್ಧಿ ಇಲಾಖೆ, ಮಧ್ಯಮ ಸಣ್ಣ ಕೈಗಾರಿಕೆಗಳ ಇಲಾಖೆಯ ಅಧಿಕಾರಿಗಳ ಜತೆ ಸಚಿವರು ಸಮಾಲೋಚನೆ ನಡೆಸಿದರು. ಅಲ್ಲದೆ ಬೆಂಗಳೂರಿನಲ್ಲಿರುವ ಎಚ್‌ಎಂಟಿ ಕೌಶಲ ತರಬೇತಿ ಕೇಂದ್ರದ ಮೂಲಕ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಸೇರಿ ವಿವಿಧ ತಾಂತ್ರಿಕ ಕೋರ್ಸ್‌ಗಳನ್ನು ಮಾಡಿಕೊಂಡಿರುವ ಯುವಜನರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡುವ ಬಗ್ಗೆ ಕಂಪನಿಯ ಅಧಿಕಾರಿಗಳ ಜತೆ ಚರ್ಚಿಸಿದರು.
ಪ್ರಮುಖವಾಗಿ, ಪ್ರಸಕ್ತ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಯುವ ಜನರನ್ನು ಸಜ್ಜು ಮಾಡಬೇಕು. ಕೇವಲ ಕೌಶಲ ತರಬೇತಿ ನೀಡಿದರಷ್ಟೇ ಸಾಲದು. ಆ ಕುಶಲತೆಗೆ ತಕ್ಕಂತೆ ಉದ್ಯೋಗ ಲಭ್ಯವಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವಜನರಿಗೆ ಉದ್ಯೋಗ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಕ್ಕಳು ಇಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಕೇಳಿಕೊಂಡು ನನ್ನ ಬಳಿಗೆ ದಿನನಿತ್ಯವೂ ಬರುತ್ತಾರೆ. ಅಂಕಿ-ಅಂಶಗಳ ಪ್ರಕಾರ ಮಂಡ್ಯ ಜಿಲ್ಲೆ ಒಂದರಲ್ಲಿಯೇ 50 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಯುವಜನರೇ ಇದ್ದಾರೆ. ಶೇ.80ರಷ್ಟು ಜನರು ಬೇಸಾಯದಲ್ಲಿಯೇ ನಿರತರಾಗಿದ್ದು, ಕೃಷಿ ಆಧಾರಿತ ಉದ್ಯೋಗ ಅವಕಾಶಕ್ಕೆ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಸಚಿವರು ಹೇಳಿದರು.
ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಗಾರ್ಮೆಂಟ್ಸ್ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ಜನರಿಗೆ ಜವಳಿ ಉದ್ಯಮದಲ್ಲಿ ಉತ್ತಮ ತರಬೇತಿ ಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಬಹುದು. ಮಂಡ್ಯದಲ್ಲಿ ಇಂತಹ ಪ್ರಯೋಗ ಮಾಡಿದರೆ ಅದನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಬಹುದು ಎಂದು ಸಚಿವರು ಹೇಳಿದರು.
ಮೊಬೈಲ್ ಹೆಲ್ತ್ ಘಟಕ ಆರಂಭ
ಮಂಡ್ಯ ಲೋಕಸಭೆ ಕ್ಷೇತ್ರ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರಕ್ಕೊಂದು ಮೊಬೈಲ್ ಆರೋಗ್ಯ ಘಟಕಗಳನ್ನು ಆರಂಭಿಸುವ ಬಗ್ಗೆ ಸಚಿವರು ಎಚ್‌ಎಲ್‌ಎಲ್ ಹೆಲ್ತ್ ಕೇರ್ ಸಂಸ್ಥೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.
ಈ ಬಗ್ಗೆ ವಿಸ್ತೃತ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು, ಮೊಬೈಲ್ ಆರೋಗ್ಯ ಘಟಕಗಳನ್ನು ಆರಂಭಿಸುವ ಬಗ್ಗೆ, ಆರೋಗ್ಯ ಸೇವೆಯ ವಿಧಾನ, ಹಣಕಾಸು ಸಂಪನ್ಮೂಲ ಕ್ರೋಡೀಕರಣ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ಮಾಹಿತಿ ಸಂಗ್ರಹ ಮಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ನರ್ಸ್, ಲ್ಯಾಬ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ವೈದ್ಯಕೀಯ ಪರಿಕರಗಳ ತಯಾರಿಕೆ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗಗಳಿಗೆ ಬೇಡಿಕೆ ಇದೆ. ಅರ್ಹ ಯುವಜನರಿಗೆ ಅಗತ್ಯವಾದ ತರಬೇತಿ ಕೊಡಬೇಕು. ಮಂಡ್ಯ ಕ್ಷೇತ್ರದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ಖಾಸಗಿ ಹಾಗೂ ಸಾರ್ವಜನಿಕ ವಲಯದ ಆರೋಗ್ಯ ಕ್ಷೇತ್ರದಲ್ಲಿ ಕೌಶಲಾಧಾರಿತ ಉದ್ಯೋಗಗಳಿಗೆ ಬೇಡಿಕೆ ಇದೆ. ಅಲ್ಲದೆ, ಕೇಂದ್ರ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಇಂತಹ ಉದ್ಯೋಗಿಗಳ ಅಗತ್ಯ ಇದೆ. ಅದಕ್ಕಾಗಿ ಯುವಜನರಿಗೆ ಸೂಕ್ತ ತರಬೇತಿ ಕೊಟ್ಟು ಸಜ್ಜು ಮಾಡಬೇಕಿದೆ. ಅಲ್ಲದೆ, ಕೌಶಲ ಆಧಾರಿತ ಉದ್ಯೋಗ ಸೃಷ್ಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಹಾಗೂ ಸಂಪನ್ಮೂಲಗಳನ್ನು ಒದಗಿಸಿದೆ. ಅದೆಲ್ಲವನ್ನೂ ಸದ್ಬಳಕೆ ಮಾಡಿಕೊಂಡು ತಮಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.