

ಮಂಡ್ಯ: ಕೇಂದ್ರ ಸರ್ಕಾರದ ಅನುದಾನದ ಜತೆಗೆ ಕಾರ್ಖಾನೆಗಳ ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಚುರುಕಾಗಿ ಹೊಸ ಯೋಚನೆಗಳ ಮೂಲಕ ಮಾದರಿ ಶಾಲೆ, ಕಾಲೇಜು, ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣ ಕುರಿತು ಯೋಜನೆ ಸಿದ್ಧಪಡಿಸಿ. ಇದಕ್ಕೆ ಕೇಂದ್ರ ಸರ್ಕಾರ ಅಥವಾ ಸಿಎಸ್‌ಆರ್ ಅನುದಾನದ ಮೂಲಕ ಅನುಷ್ಠಾನಗೊಳಿಸೋಣ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎಂದರು.
ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಹಲವಾರು ಕಾರ್ಯಕ್ರಮಗಳಿವೆ. ಅಧಿಕಾರಿಗಳು ಚಿಂತನೆ ನಡೆಸಿ ಹೊಸ ಯೋಜನೆಗಳನ್ನು ರೂಪಿಸಿ. ಇಲಾಖೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ಸಮರ್ಪಕ ಹಾಗೂ ಪಾರದರ್ಶಕವಾಗಿ ಬಳಕೆ ಮಾಡಬೇಕು. ಅನುದಾನ ಬಿಡುಗಡೆಯಾಗಿ ಬಳಕೆಯಾಗದಿರುವ ಪ್ರಕರಣಗಳನ್ನು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೋಡಿದ್ದೇನೆ. ಸಮರ್ಪಕ ಅನುದಾನದ ಬಳಕೆ ಕೂಡ ಜಿಲ್ಲೆಯ ಅಭಿವೃದ್ಧಿಯ ಸಂಕೇತ ಎಂದು ಹೇಳಿದರು.
ಒತ್ತಡಗಳಿಗೆ ಮಣಿಯ ಬೇಡಿ:
ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚು. ಅವರ ಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ. ಜಿಲ್ಲೆಯಲ್ಲಿ ಹಲವು ಸಂಪನ್ಮೂಲಗಳಿವೆ. ಆದರೂ ಬೇರೆ ಜಿಲ್ಲೆಗೆ ಹೋಲಿಸಿದರೆ ಮಂಡ್ಯದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಯಾವುದೇ ಒತ್ತಡಗಳಿಗೆ ಮಣಿಯ ಬೇಡಿ ಕಾನೂನುಬದ್ಧವಾಗಿ ಕೆಲಸನಿರ್ವಹಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು, ಕೆ.ಆರ್.ಎಸ್ ಅಣೆಕಟ್ಟೆಯಲ್ಲಿರುವ ನೀರಿನ ಮಟ್ಟ, ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅನುಸರಿಸುವ ಕ್ರಮ, ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮಾಹಿತಿಯನ್ನು ಸಚಿವರಿಗೆ ನೀಡಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಮನ್‌ಮುಲ್‌ನಿಂದ ನ್ಯಾಷನಲ್ ಪ್ರೊಗ್ರಾಮ್ ಫಾರ್ ಡೇರಿ ಡೆವಲಪ್‌ಮೆಂಟ್ ಯೋಜನೆಯಡಿ ಮೂರು ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮನರೇಗಾ, ಸ್ವಚ್ಛ ಭಾರತ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿಲ್ಲೆಯ ಪ್ರಗತಿಯ ಬಗ್ಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈ ಬಾರಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹೆಚ್ಚಿನ ಗುರಿ ನಿಗದಿಯಾಗಲಿದೆ. ಇದಕ್ಕೆ ಇಂದಿನಿಂದಲೇ ಸಿದ್ಧತೆ ಪ್ರಾರಂಭಿಸಿ ಎಂದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಯೋಜನಾಧಿಕಾರಿ ಸಂಜೀವಪ್ಪ, ನಿವೃತ್ತ ಐ.ಎ.ಎಸ್ ಅಧಿಕಾರಿ ಕೃಷ್ಣಯ್ಯ ಇತರರಿದ್ದರು.