ಕೇಂದ್ರ ಸಚಿವರಿಗೆ ರೈತರ ಸಮಸ್ಯೆ ಮನವರಿಕೆ

HUN-DEC-2-3(TOBACCO FARMERS MEETING WITH COMMERCE MINISTER(
ನವದೆಹಲಿಯ ನೂತನ ಪಾರ್ಲಿಮೆಂಟ್‌ನ ಉದ್ಯೋಗಭವನದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದ ರೈತ ಮುಖಂಡರ ಸಭೆ ನಡೆಸಿದರು. ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಸಾ.ರಾ.ಮಹೇಶ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ಹೊಸೂರು ಕುಮಾರ್, ಚಂದ್ರೇಗೌಡ, ತಟ್ಟೆಕೆರೆ ಶ್ರೀನಿವಾಸ್ ಇದ್ದರು.
Published on

ಹುಣಸೂರು: ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಸೋಮವಾರ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್‌ರೊಂದಿಗೆ ಸತತ 2 ಗಂಟೆಗಳ ಸಭೆ ನಡೆಸಿದರು.

ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಹಾಜರಿದ್ದ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ.ಹರೀಶ್‌ಗೌಡ, ರೈತ ಮುಖಂಡರು ವಿವರವಾಗಿ ಸಚಿವರಿಗೆ ತಿಳಿಸಿದರು.

ಸೋಮವಾರ ಬೆಳಗ್ಗೆ ನವದೆಹಲಿಯ ನೂತನ ಪಾರ್ಲಿಮೆಂಟ್ ಕಟ್ಟಡದ ಉದ್ಯೋಗ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ರಾಜ್ಯದ ಮೈಸೂರು ಭಾಗದ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ರೈತರು ಬೆಳೆಯುವ ಎಫ್‌ಸಿವಿ ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ. ಆದರೆ ರೈತರು ನ್ಯಾಯಯುತ ದರ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಬಾರಿ ಕಟಾವಿನ ಸಮಯಲ್ಲಿ ಅತಿಯಾದ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಗುಣಮಟ್ಟದ ಬೆಳೆ ಸಿಗಲಿಲ್ಲ. 90 ಮಿಲಿಯನ್ ಕೆಜಿಗಳ ಬೆಳೆ ನಿರೀಕ್ಷೆಯಿತ್ತು. ಈ ಪೈಕಿ ಕೆಳದರ್ಜೆಯ ಹೊಗೆಸೊಪ್ಪು ಶೇ.50ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಮಧ್ಯಮ ಗುಣಮಟ್ಟದ ತಂಬಾಕು ಶೇ.30ರಷ್ಟು ಹಾಗೂ ಬ್ರೈಟ್ ಗ್ರೇಡ್ ತಂಬಾಕು ಶೇ.20ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ಮಳೆಯ ಅವಾಂತರ ಎಲ್ಲವನ್ನು ತಲೆಕೆಳಗು ಮಾಡಿದೆ. ತಂಬಾಕಿನಲ್ಲಿರುವ ನಿಕೋಟಿನ್ ಅಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದರು.

ಇದರಿಂದಾಗಿ ರೈತರು ತಂಬಾಕು ಉತ್ಪನ್ನದ ವೆಚ್ಚ ಕೆಜಿಗೆ 150ರಿಂದ 160 ರೂ.ಗಳನ್ನು ತಲುಪಿದೆ. ತಿಂಗಳ ಹಿಂದೆ ಸಂಪನ್ನಗೊಂಡ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಸರಾಸರಿ ಕೆಜಿಗೆ 320 ರೂ. ದೊರಕಿದ್ದರೆ, ಕರ್ನಾಟಕದ ರೈತರಿಗೆ ಅದು ಕೇವಲ 265 ರೂ.ಗಳಿಗೆ ನಿಂತಿದೆ. ರೈತರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಕೂಡಲೇ ತಂಬಾಕು ಮಂಡಳಿ, ಖರೀದಿ ಕಂಪನಿಗಳು ಮತ್ತು ರೈತರೊಂದಿಗೆ ಸಭೆ ನಡೆಸಿ ಕರ್ನಾಟಕ ರೈತರ ಪರ ನಿಲುವು ತೆಗೆದುಕೊಂಡು ಸೂಕ್ತ ದರ ನಿಗದಿಪಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅನಧಿಕೃತರನ್ನು ಕಾಪಾಡಬೇಕಿದೆ: ರಾಜ್ಯದಲ್ಲಿ 54 ಸಾವಿರ ಅಧಿಕೃತ ತಂಬಾಕು ಬೆಳೆಗಾರರಿದ್ದರೆ, 16 ಸಾವಿರ ಅನಧೀಕೃತ ಬೆಳೆಗಾರರು(ಕಾರ್ಡ್‌ದಾರರು) ಇದ್ದು, ಇವರು ಬೆಳೆಯುವ ತಂಬಾಕಿಗೆ ಮಂಡಳಿ ವಿವಿಧ ರೀತಿಯ ದಂಡ ಶುಲ್ಕ ವಿಧಿಸುತ್ತದೆ. ಇದು ಅನಧೀಕೃತರಿಗೆ ಮಾಡುವ ಅನ್ಯಾಯವಾಗಿದೆ. ಸರ್ಕಾರ ಈ ಕೂಡಲೇ ಅನಧೀಕೃತ ಬೆಳೆಗಾರರಿಂದ ದಂಡ ವಸೂಲಿ ನಿಲ್ಲಿಸಬೇಕು.ಅಲ್ಲದೆ ಕೆಳದರ್ಜೆಯ ತಂಬಾಕಿನ ಖರೀದಿ ಇನ್ನು ನಡೆದಿಲ್ಲ. ಈ ಕೂಡಲೇ ಖರೀದಿ ಕಂಪನಿಗಳು ಕೆಳದರ್ಜೆಯ ತಂಬಾಕಿನ ಖರೀದಿ ಈಗಿಂದಲೇ ಆರಂಭಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಪದೇಪದೆ ತಂಬಾಕು ರೈತರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ. ಸರ್ಕಾರ ಈ ಕುರಿತು ಗಂಭೀರ ಚಿಂತನೆಯೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಈ ಬಾರಿ ದರ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಕಾಲಹರಣ ಮಾಡದೇ ಖರೀದಿ ಕಂಪನಿಗಳ ಜತೆ ಸಭೆ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ. ರೈತರ ನಿಜವಾದ ಸಮಸ್ಯೆಗಳನ್ನು ಪರಿಹರಿಸುವತ್ತ ಶೀಘ್ರ ಕ್ರಮ ಅನಿವಾರ್ಯ ಎಂದು ಸಚಿವರಿಗೆ ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕು ಮಂಡಳಿ ಅಥವಾ ಖರೀದಿ ಕಂಪನಿಗಳು ಆಂಧ್ರಪ್ರದೇಶ, ಕರ್ನಾಟಕ ಎಂದು ತಾರತಮ್ಯ ನೀತಿ ಅನುಸರಿಸುವುದನ್ನು ಬಿಡಬೇಕು. ತಂಬಾಕು ಬೆಳೆಯನ್ನು ಫಸಲ್ ಬಿಮಾ ಯೋಜನೆಗ ವ್ಯಾಪ್ತಿಗೆ ತರಬೇಕು. ತಂಬಾಕಿಗೆ ಎಂಎಸ್‌ಪಿ ನಿಗದಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಿರು ಎಂದು ಒತ್ತಾಯಿಸಿದರು.

ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಿಕ್ಷ ಉಂಡುವಾಡಿ ಸಿ.ಚಂದ್ರೇಗೌಡ ಮಾತನಾಡಿ, ಖರೀದಿ ಕಂಪನಿಗಳ ಬೇಜವಾಬ್ದಾರಿ ವರ್ತನೆ ಸರಿಯಲ್ಲ. ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಕೇಂದ್ರ ಸರ್ಕಾರ, ಮಂಡಳಿ ಮತ್ತು ಖರೀದಿ ಕಂಪನಿಗಳು ಕೂಡ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಇಂದು ಗುಂಟೂರಿನಲ್ಲಿ, ನಾಳೆ ನವದೆಹಲಿಯಲ್ಲಿ ಸಭೆ: ಜನಪ್ರತಿನಿಧಿಗಳು ಮತ್ತು ರೈತಮುಖಂಡರ ಮನವಿ ಆಲಿಸಿ ಕೇಂದ್ರ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ಮಾತನಾಡಿ, ಸಮಸ್ಯೆಯ ಗಂಭೀರತೆ ಅರಿತಿದ್ದೇನೆ. ಸಮಸ್ಯೆಯ ಶೀಘ್ರ ಮತ್ತು ಶಾಶ್ವತ ಪರಿಹಾರಕ್ಕಾಗಿ ಡಿ.3 ರಂದು ಗುಂಟೂರಿನಲ್ಲಿ ತಂಬಾಕು ಮಂಡಳಿ, ಖರೀದಿ ಕಂಪನಿಗಳು, ಜನಪ್ರತಿನಿಧಿಗಳು ಮತ್ತು ರೈತಮುಖಂಡರ ಸಭೆ ಆಯೋಜಿಸಲು ಇಲಾಖೆ ಎಂಡಿ ಅವರಿಗೆ ಸೂಚಿಸುತ್ತೇನೆ. ಅಲ್ಲಿನ ಸಭೆಯ ವರದಿಯನ್ನು ಪಡೆದು ಡಿ.4ರಂದು ನವದೆಹಲಿಯಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಸಭೆ ನಡೆಸುವೆ ಎಂದರು.

ಸಭೆಯಲ್ಲಿ ಜೆಡಿಎಸ್ ಯುವಮುಖಂಡ ನಿಖಿಲ್ ಕುಮಾರಸ್ವಾಮಿ, ಕೆ.ಆರ್.ನಗರ ಕ್ಷೇತ್ರ ಮಾಜಿ ಶಾಸಕ ಸಾ.ರಾ.ಮಹೇಶ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ರೈತ ಮುಖಂಡರಾದ ತಟ್ಟೆಕೆರೆ ಶ್ರೀನಿವಾಸ್, ವಕೀಲ ಮೂರ್ತಿ, ಮೋಹನ್,ಶಿವಶಂಕರ್, ಚೇತನ್ ಮತ್ತಿತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net