ಲೋಕಾಯುಕ್ತ ಡಿವೈಎಸ್‌ಪಿ ಶಂಕರಗೆ ಕೇಂದ್ರ ಗೃಹ ಸಚಿವರ ಪದಕ

SHANKAR RAAGI
Published on

ಲಕ್ಷ್ಮೇಶ್ವರ: ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಶಂಕರ ಎಂ. ರಾಗಿ ಅವರು 2023ರ ಕೇಂದ್ರ ಗೃಹ ಸಚಿವರ ತನಿಖಾ ಕೌಶಲ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದವರಾದ ಶಂಕರ ಅವರಿಗೆ ಪ್ರಶಸ್ತಿ ಲಭಿಸಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯು ಕರ್ನಾಟಕದ 7 ಪೊಲೀಸ್ ಅಧಿಕಾರಿಗಳು ಸೇರಿ ವಿವಿಧ ರಾಜ್ಯಗಳ 140 ಪೊಲೀಸ್ ಅಧಿಕಾರಿಗಳು ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ ಡಬಲ್ ಮರ್ಡರ್ ಕೇಸ್ ಬೇಧಿಸಿದ ರಾಗಿ: 2013ರಲ್ಲಿ ಚಿಕ್ಕೋಡಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಶಂಕರ್ ರಾಗಿ ಅವರು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದರು. ಆಗ ಅವರು ಚಿಕ್ಕೋಡಿ ಠಾಣೆಯ ಸಿಪಿಐ ಆಗಿದ್ದರು. ತಾಲೂಕಿನ ಮಮದಾಪುರ ಕೆಕೆ ಗ್ರಾಮದ ಸಂಗೀತಾ ಆಕಳೆ, ಬಸವರಾಜ ಬುರ್ಜಿ ಅವರ ಜೋಡಿ ಕೊಲೆಯಾಗಿತ್ತು.. ಇದರ ತನಿಖೆ ಕೈಗೆತ್ತಿಕೊಂಡಿದ್ದ ಶಂಕರ ರಾಗಿ ಪ್ರಕರಣವನ್ನು ಬೇಧಿಸಿದ್ದರು. ಅನೈತಿಕ ಸಂಬಂಧದ ಶಂಕೆಯಿಂದ ಸಂಗೀತಾಳ ಪತಿ ಬಾಬು ಆಕಳೆ ಎಂಬಾತ ಪತ್ನಿ ಸಂಗೀತಾ ಹಾಗೂ ಬಸವರಾಜ ಎಂಬುವರನ್ನ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ ಇಬ್ಬರ ದೇಹವನ್ನು ಜಾಲಿ ಮುಳ್ಳಿನ ಗಿಡಕ್ಕೆ ಕಟ್ಟಿ ಬೆಂಕಿ ಇರಿಸಲಾಗಿತ್ತು.

ಈ ಪ್ರಕರಣ ಬೆಳಗಾವಿಯಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣ ಬೇಧಿಸಿದ ಶಂಕರ ರಾಗಿ ಅವರು ಬಾಬು ಆಕಳೆ, ನಾಗಪ್ಪ ಆಕಳೆ, ಮುತ್ತಪ್ಪ ಆಕಳೆ ಅವರನ್ನ ಬಂಧಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಜೋಡಿ ಕೊಲೆ ಪ್ರಕರಣದ ವಿಚಾರಣೆ ನಡೆದು ಮೂವರು ಆರೋಪಿಗಳಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2022 ರಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಪರಾಧ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018 ರಲ್ಲಿ ಈ ಪ್ರಶಸ್ತಿ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಆಗಸ್ಟ್ 12 ಕ್ಕೆ ಈ ಪ್ರಶಸ್ತಿ ಘೋಷಿಸಲಾಗುತ್ತದೆ. ಶಿಗ್ಲಿ ಗ್ರಾಮದ ಶಂಕರ ಎಂ. ರಾಗಿ ಅವರು ಕಲಬುರಗಿ, ಶಹಪೂರ, ಚಿಕ್ಕೋಡಿ, ಗದಗ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ, ದಕ್ಷ ಆಡಳಿತದಿಂದ ಇವರಿಗೆ ಮುಖ್ಯಮಂತ್ರಿಗಳ ಪದಕ, ಕಳೆದ ವರ್ಷ ರಾಷ್ಟ್ರಪತಿ ಪ್ರಶಸ್ತಿಯೂ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net