ಶೀಘ್ರ ಸಾಧು-ಸಂತರ ನಿಯೋಗದೊಂದಿಗೆ ಕೇಂದ್ರ ಗೃಹ ಸಚಿವರ ಭೇಟಿ

New Gunadharanandi New
Published on

ಹುಬ್ಬಳ್ಳಿ : ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮಾಡುವವರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸರ್ಕಾರದ ನಡೆಯಿಂದ ಬೇಸತ್ತು ಶೀಘ್ರ ಸಾಧು-ಸಂತರ ನಿಯೋಗದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲಾಗುವುದು ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದ್ದಾರೆ.

ಇಲ್ಲಿಗೆ ಸಮೀಪದ ವರೂರು ನವಗ್ರಹತೀರ್ಥ ಕ್ಷೇತ್ರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಧರ್ಮಸ್ಥಳದ ಮೇಲೆ ಆಗುತ್ತಿರುವ ಷಡ್ಯಂತ್ರದಿಂದ ಮನಸ್ಸಿಗೆ ಸಾಕಷ್ಟು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಯೋಗದ ಭೇಟಿಗೆ ನಿಗದಿತ ದಿನ ನೀಡುವಂತೆ ಕೋರಿ ಈಗಾಗಲೇ ಗೃಹ ಸಚಿವರಿಗೆ ಪತ್ರವನ್ನೂ ಬರೆಯಲಾಗಿದೆ. ಗೃಹ ಸಚಿವರು ನೀಡುವ ಸಮಯದಂದು ಅವರ ಭೇಟಿಗೆ ಸಾಧು-ಸಂತರ ನಿಯೋಗ ದೆಹಲಿಗೆ ತೆರಳಲಿದೆ ಎಂದರು.

ಶ್ರೀ ವಚನಾನಂದ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಎಲ್ಲ ಧರ್ಮದ ಮಠಾಧೀಶರೊಂದಿಗೆ, ಸಂತರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಅನೇಕ ಸಾಧು-ಸಂತರು ಗೃಹ ಸಚಿವರ ಭೇಟಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ ರಾಜ್ಯದ ಜನರು ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ, ಸರ್ಕಾರ ಎಚ್ಚೆತ್ತುಕೊಳ್ಳದೇ ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಷಡ್ಯಂತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮುಖ್ಯಮಂತ್ರಿಯವರು ಈ ಷಡ್ಯಂತ್ರದ ಮೌನ ವಹಿಸಿರುವುದು ಏಕೆ ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net