ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿ: ಹುಯಿಲಾಳು ರಾಮಸ್ವಾಮಿ

34
Published on

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯನ್ನು ನಾಗವಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಯಿಲಾಳು ರಾಮಸ್ವಾಮಿ ಖಂಡಿಸಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸದನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ನಿಜಕ್ಕೂ ಖಂಡನೀಯ. ಅಮಿತ್ ಷಾ ಅವರಿಂದು ದೇಶದ ಗೃಹ ಸಚಿವರಾಗಲು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವೇ ಕಾರಣ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ದೇಶ ಯಾವುದೇ ಧರ್ಮ ಅಥವಾ ದೇವರ ಭಕ್ತಿಯಿಂದ ನಡೆಯುವುದಿಲ್ಲ. ಬದಲಾಗಿ ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ನಡೆಯುತ್ತಿದೆ. ಅಂಬೇಡ್ಕರ್ ಅವರು ಒಂದು ಶಕ್ತಿಯಾಗಿದ್ದು, ಇಡೀ ದೇಶದ ಅಡಿಪಾಯ. ಅವರು ರಚಿಸಿದ ಸಂವಿಧಾನದ ಮೇಲೆ ನಿಂತಿದೆ. ಅಂತಹ ಮಹಾನ್ ಶಕ್ತಿಯ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಅಗೌರವದಿಂದ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಅಸ್ಪೃಶ್ಯರು, ದಲಿತರು, ಶೋಷಿತರು ಸೇರಿದಂತೆ ದೇಶದ ಮೇಲೆ ಗೌರವ ಇರುವ ಎಲ್ಲರೂ ಅಂಬೇಡ್ಕರ್ ಅವರನ್ನು ದೇವರೆಂದು ಪೂಜಿಸುತ್ತಿದ್ದು, ಅಂತಹವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಅಧಿಕಾರವನ್ನು ಅಮಿತ್ ಷಾಗೆ ಕೊಟ್ಟವರಾರು ? ಎಂದು ಪ್ರಶ್ನಿಸಿರುವ ಅವರು, ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net