

ಬೆಳಗಾವಿ: ನೇಹಾ ಹತ್ಯೆ ಪ್ರಕರಣವನ್ನು ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್‌ನರು ಹೇಳಿದ್ದರು. ಇದು ವೈಯಕ್ತಿಕ ಅಲ್ಲ. ಮತಾಂತರ ಆಗಲು ನೇಹಾ ಹಿರೇಮಠ ಒಪ್ಪದಿದ್ದಕ್ಕೆ ಹತ್ಯೆಯಾಗಿದೆ. ಅವರ ಪಾಲಕರು ನನಗೆ ಖುದ್ದಾಗಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಇದನ್ನು ಮುಚ್ಚಿ ಹಾಕುವ ಯತ್ನದಲ್ಲಿದೆ. ಈ ಪ್ರಕರಣಕ್ಕೆ ಸರಿಯಾಗಿ ನ್ಯಾಯ ಸಿಗಬೇಕು ಅಂದರೆ ಸಿಬಿಐಗೆ ವಹಿಸಬೇಕು. ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುಡುಗಿದರು.
ಹುಕ್ಕೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ಅಂಟಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಸ್‌ಡಿಪಿಐ (ಸೋಶಿಯನ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾ) ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಚುನಾವಣೆಗೆ ಅದರ ಸಹಕಾರ ಪಡೆಯುತ್ತಿದೆ. ನೀವು ಚಿಂತೆ ಮಾಡಬೇಡಿ ಕಾಂಗ್ರೆಸ್ ಸರ್ಕಾರ ಏನೇ ಮಾಡಲಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಿ. ಅವರು ಕರ್ನಾಟಕವನ್ನು ರಕ್ಷಿಸುತ್ತಾರೆ ಎಂದರು.
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದರೆ ಕಾಂಗ್ರೆಸ್ ಸರ್ಕಾರ ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ವಾದಿಸಿತ್ತು. ಎನ್‌ಐಎ ತಂಡ ಬಂದು ಎಸ್‌ಡಿಪಿಐ ಅವರೇ ಬ್ಲಾಸ್ಟ್ ಮಾಡಿದ್ದು ಎಂಬ ಮಾಹಿತಿ ಹೊರ ಹಾಕಿದೆ. ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ದೇಶದ ಸುರಕ್ಷತೆ ಸಾಧ್ಯ. ಉರಿ, ಪುಲ್ವಾಮಾ ದಾಳಿ ಬಳಿಕ ಏರ್‌ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಉತ್ತರ ಕೊಟ್ಟಿದೆ. ಮೋದಿ ಆಡಳಿತದಿಂದ ದೇಶದ ಆರ್ಥಿಕತೆಯೂ ವೃದ್ಧಿಯಾಗಿದೆ. ಅವರು 3ನೇ ಬಾರಿ ಪ್ರಧಾನಿಯಾದರೆ ಭಾರತ ಮೂರನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಲಿದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗೆ ಮತ ನೀಡಿ ಗೆಲ್ಲಿಸಿ ಎಂದರು.
ಭಾರತ ಚಂದ್ರಯಾನ ಯಶಸ್ವಿಗೊಳಿಸಿ ಹೊಸ ಇತಿಹಾಸ ನಿರ್ಮಿಸಿದೆ. ಆದರೆ, 20 ವರ್ಷಗಳಾದರೂ ಸೋನಿಯಾ ಗಾಂಧಿಗೆ, ರಾಹುಲ್ ಗಾಂಧಿ ಲಾಂಚ್ ಮಾಡಿಸಲು ಸಾಧ್ಯವಾಗಿಲ್ಲ. ಸೋನಿಯಾಗೆ ರಾಹುಲ್ ಗಾಂಧಿಯನ್ನು ದೇಶದಲ್ಲಿ ಲಾಂಚ್ ಮಾಡಲು ಸಾಧ್ಯವಾಗುತ್ತಿಲ್ಲ. ರಾಯಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಲದಿನೇಶ್ ಪ್ರತಾಪ ಎದುರು ರಾಹುಲ್ ಸೋಲುವುದು ಖಚಿತ. 70 ವರ್ಷ ಅಧಿಕಾರ ಇದ್ದರೂ ಕಾಂಗ್ರೆಸ್ ರಾಮಮಂದಿರ ನಿರ್ಮಿಸಲಿಲ್ಲ. ಕೇವಲ ತುಷ್ಟೀಕರಣ ರಾಜಕಾರಣ ಮಾಡಿದೆ. ಆದರೆ ನರೇಂದ್ರ ಮೋದಿ 2ನೇ ಅವಧಿಯಲ್ಲೇ ರಾಮಮಂದಿರ ನಿರ್ಮಿಸಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಬರಲಿಲ್ಲ ಎಂದು ಹೇಳಿದರು.
ಪರಿವಾರವಾದಿ ಅಭ್ಯರ್ಥಿ ತಿರಸ್ಕರಿಸಿ:
ಕರೊನಾ ವೇಳೆ ರಾಹುಲ್ ಗಾಂಧಿ ಅವರು ವ್ಯಾಕ್ಸಿನ್ ತಗೋಬೇಡಿ ಅದು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡಿದರು. ಆದರೆ ರಾಹುಲ್ ಅವರು ತಮ್ಮ ಸಹೋದರಿಯೊಂದಿಗೆ ರಾತೋರಾತ್ರಿ ವ್ಯಾಕ್ಸಿನ್ ತೆಗೆದುಕೊಂಡರು. ಮೂರು ತಿಂಗಳಿಗೊಮ್ಮೆ ವಿದೇಶ ಪ್ರಯಾಣ ಮಾಡುವ ರಾಹುಲ್ ಬಾಬಾ ಬೇಕಾ? ಅಥವಾ ರಜೆ ಪಡೆಯದೇ ಕೆಲಸ ಮಾಡುವ ಮೋದಿ ಬೇಕಾ ಎಂದು ಪ್ರಶ್ನಿಸಿದ ಅಮಿತ್ ಷಾ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ 3ನೇ ಬಾರಿಗೆ ಮೋದಿಯವರನ್ನು ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ನೆರೆದ ಜನರಲ್ಲಿ ಅಮಿತ್ ಷಾ ಕ್ಷಮೆ ಕೋರಿದರು. ಭಾಷಣದ ಆರಂಭದಲ್ಲಿ ಬಡಕುಂದ್ರಿಯ ಹೊಳೆಮ್ಮದೇವಿ, ಸಂಕೇಶ್ವರ ಶಂಕರಲಿಂಗ, ಸವದತ್ತಿಯ ಯಲ್ಲಮ್ಮದೇವಿ ಸ್ಮರಿಸಿದರು. ಶಿವಾಜಿ-ಭವಾನಿ ಪರ ಘೋಷಣೆ ಕೂಗಿ ಹಿಂದುತ್ವದ ಕಹಳೆ ಮೊಳಗಿಸಿದರು. ಚಿಕ್ಕೋಡಿಯಲ್ಲಿರುವ ಪರಿವಾರವಾದಿ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.
ವಿವೇಕರಾವ್ ಬಿಜೆಪಿ ಸೇರ್ಪಡೆ:
ಬಹಿರಂಗ ಸಮಾವೇಶದಲ್ಲೇ ಅಮಿತ್ ಷಾ ಸಮ್ಮುಖದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್‌ನ ವಿವೇಕರಾವ್ ಪಾಟೀಲ ಬಿಜೆಪಿ ಸೇರಿದರು. ಪಕ್ಷದ ಧ್ವಜ ನೀಡಿ, ಶಾಲು ಪಾಟೀಲ ಅವರನ್ನು ಅಮಿತ್ ಷಾ ಬರಮಾಡಿಕೊಂಡರು. ಕುರುಬ ಸಮುದಾಯದ ವಿವೇಕರಾವ್ ಪಾಟೀಲರ ಕುಟುಂಬ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ತನ್ನದೇ ಆತ ಹಿಡಿತ ಹೊಂದಿರುವುದು ಬಿಜೆಪಿಗೆ ಬಲ ಬಂದಂತಾಗಿದೆ.
ಸಚಿವ ಜಾರಕಿಹೊಳಿಯಿಂದ ಸಾವಿರಾರು ಎಕರೆ ಭೂ ಕಬಳಿಕೆ:
ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಷಾ ಅವರು, ಕಾಂಗ್ರೆಸ್ ಅಭ್ಯರ್ಥಿಯ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಾರೆ. ಅವರ ಕುಟುಂಬಸ್ಥರು ಗುಡ್ಡ ಕಟಾವು ಮಾಡಿ ಜಾಗ ಕಬ್ಜಾ ಮಾಡಿದ್ದಾರೆ. ಸಾವಿರಾರು ಎಕರೆ ಜಮೀನು ಕಬಳಿಸಿದ್ದಾರೆ. ಹಿಂದು ಸಂಸ್ಕೃತಿ ಹಾಗೂ ಹಿಂದು ನಾಯಕರನ್ನು ಅಪಮಾನಿಸುತ್ತಾರೆ. ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಕಳ್ಳಬಟ್ಟಿ ತಯಾರಿಸುವವರು ಇವರ ಜತೆಗಿದ್ದಾರೆ. ಕಮಿಷನ್ ಪಡೆಯಲು ಅವರ ಏಜೆಂಟರು ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದ ರಮೇಶ ಕತ್ತಿ, ಎಂಎಲ್‌ಸಿ ಪಿ.ಎಚ್. ಪೂಜಾರ, ಶಾಸಕರಾದ ನಿಖಿಲ್ ಕತ್ತಿ, ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹುಂದ್ರಿ, ಬಿಜೆಪಿ ಮುಖಂಡ ರಾಮಚಂದ್ರ ಜೋಶಿ, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ ಇತರರು ಇದ್ದರು.