ಮೈಸೂರಿನ ತಾರಾಲಯ ಕಾಮಗಾರಿ ವೀಕ್ಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್

WhatsApp Image 2024-11-09 at 8.09.58 PM
Published on

ಮೈಸೂರು: ನಗರದ ಚಾಮುಂಡಿಬೆಟ್ಟ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ 86 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾರಾಲಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಶುಕ್ರವಾರ ವೀಕ್ಷಿಸಿದರು.

ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಾರಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಸೇವೆಯು ದೇಶಕ್ಕೆ ದೊರೆಯಲಿದೆ. ಇದು ಕೇವಲ ಮೈಸೂರು ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಭಾರತಕ್ಕೆ ವಿಶೇಷವಾದ ತಾರಾಲಯವಾಗಿದೆ. ದೇಶ, ವಿದೇಶದ ಮಕ್ಕಳು ಈ ತಾರಾಲಯವನ್ನು ಬಳಕೆ ಮಾಡಿಕೊಳ್ಳಬಹು ದು. ಕೋವಿಡ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಯಿತು. 2025ರ ಸೆಪ್ಟೆಂಬರ್ ಒಳಗೆ ತಾರಾಲಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ತಾರಾಲಯಕ್ಕೆ ಅವಶ್ಯಕವಾಗಿರುವ ಬಿಡಿ ಭಾಗಗಳನ್ನು ಜಪಾನ್, ಫ್ರಾನ್ಸ್‌ನಿಂದ ತರಿಸಿಕೊಳ್ಳಲಾಗುವುದು. ವಿಜ್ಞಾನದ ಕುರಿತ ಮಕ್ಕಳ ಕುತೂಹಲವನ್ನು ಈ ತಾರಾಲಯ ತಣಿಸಲಿದೆ. ಇಲ್ಲಿ ಆಕಾಶಕಾಯಗಳ ಕೌತುಕಗಳನ್ನು ಕಣ್ತುಂಬಿಕೊಳ್ಳಬಹುದು. ಈ ತಾರಾಲಯ ನಮಗೆ ರಾತ್ರಿ ಅಥವಾ ಹಗಲಿನಲ್ಲಿ ಕಾಣುವ ಆಕಾಶದ ನೈಜ ಚಿತ್ರಣವನ್ನು ತೆರೆದಿಡುತ್ತದೆ. ತರಗತಿ ಕೊಠಡಿಗಳು, ಶಿಕ್ಷಕರ ತರಬೇತಿ ಕೊಠಡಿಗಳು ಇದ್ದು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸಹ ಇದರ ಲಾಭವನ್ನು ಪಡೆದುಕೊಳ್ಳಬೇಕು. ತಾರಾಲಯದಲ್ಲಿ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿ ಮಾಹಿತಿ ದೊರೆಯಲಿದೆ ಎಂದರು.

ಇದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ 41ನೇ ಪ್ಲಾನಿಟೋರಿಯಂ ಆಗಿದೆ. ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಈ ತಾರಾಲಯ ವಿಶ್ವದ ಮೊದಲ ಓರೆಯಾಗಿ ನಿರ್ಮಾಣಗೊಂಡಿರುವ ತಾರಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಎಲ್‌ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆರ್‌ಎಸ್‌ಎ-ಕಾಸ್ಮಸ್ (ಫ್ರಾನ್ಸ್) ಮತ್ತು ಮೆನರ್ಸ್ ಆರ್ಬಿಟ್-ಅನಿಮೇಟ್ (ಭಾರತ) ಅಭಿವೃದ್ಧಿ ಪಡಿಸುತ್ತಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net