

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದ ಸರ್ವತೋಮುಖ ಹಿತ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ಗೆ ಇದು ನನ್ನ ಬಜೆಟ್ ಎನ್ನುವ ಭಾವ ಜನಸಾಮಾನ್ಯರಿಗೆ ಬರುವಂತಾದರೆ ಸಾರ್ಥಕವಾಗುತ್ತದೆ. ಆದರೆ, ಮುಖಕ್ಕಿಂತ ಹೆಚ್ಚು ಮುಖವಾಡಕ್ಕೇ ಬೆಲೆ ಬರುತ್ತಿದೆ. ಹೀಗಾಗಿ ಅಪಪ್ರಚಾರಕ್ಕೆ ಬೆಲೆ ಸಿಗದಂತೆ ಜನರಿಗೆ ಸುಳ್ಳು, ಸತ್ಯದ ಮನವರಿಕೆ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟರು.
ಉಡುಪಿಯ ಕಿದಿಯೂರ್ ಹೋಟೆಲ್ನ ಮಾಧವಕೃಷ್ಣ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಕೋಶದ ವತಿಯಿಂದ ಫೆ.15ರಂದು ಆಯೋಜಿಸಿದ್ದ 'ಕೇಂದ್ರ ಬಜೆಟ್, ಭಾರತೀಯ ಆರ್ಥಿಕತೆ ಮತ್ತು ಆದಾಯ ತೆರಿಗೆಯಲ್ಲಿ ಇತ್ತೀಚಿನ ಸುಧಾರಣೆ' ಎಂಬ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆ, ವಾದ, ಟೀಕೆ, ವಿಮರ್ಶೆ, ಟಿಪ್ಪಣೆಗಳು ಸಹಜ. ಆದರೂ ಸತ್ಯಕ್ಕೆ ಅಪಚಾರವಾಗದಂತೆ ನ್ಯಾಯ ಒಪ್ಪಿಕೊಳ್ಳುವುದು ಸಹಜ ಧರ್ಮ. ಈ ಬಾರಿಯ ಬಜೆಟ್ನಲ್ಲಿ ತಿಳಿಸಿದಂತೆ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಮಾಡಿದ್ದರಿಂದ ವಾರ್ಷಿಕ 12.5 ಲಕ್ಷ ರೂ.ವರೆಗೆ ಉಳಿತಾಯವಾಗಲಿದೆ ಎಂದರು.
ಬೆಂಗಳೂರಿನ ಹಿರಿಯ ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಕೇಂದ್ರ ಬಜೆಟ್-2025 ಮತ್ತು ಭಾರತೀಯ ಆರ್ಥಿಕತೆ ಕುರಿತು ಹಾಗೂ ಆದಾಯ ತೆರಿಗೆ ಕಾಯಿದೆಯಲ್ಲಿ ಇತ್ತೀಚಿನ ಸುಧಾರಣೆ ವಿಷಯವಾಗಿ ಉಡುಪಿಯ ಹಿರಿಯ ಲೆಕ್ಕ ಪರಿಶೋಧಕ ಸಿಎ ಶ್ರೀಧರ್ ಕಾಮತ್ ಸಮಗ್ರ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಆರ್ಥಿಕ ಕೋಶದ ಸಹ ಸಂಚಾಲಕ ಸುಧೀರ್ ಆರ್. ಭಟ್ ಉಪಸ್ಥಿತರಿದ್ದರು.
ರೇಷ್ಮಾ ಉಪ್ಪೂರು ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಆರ್ಥಿಕ ಕೋಶದ ಸಂಚಾಲಕ ದಿವಾಕರ್ ಶೆಟ್ಟಿ ಸ್ವಾಗತಿಸಿದರು. ದಿಲೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.