ಕೇಂದ್ರ ಬಜೆಟ್‌ನಲ್ಲಿ ದಕ್ಷಿಣ ರೈಲ್ವೆಯ ಮಂಗಳೂರು ರೈಲ್ವೆ ಪ್ರದೇಶಕ್ಕೆ 55 ಕೋಟಿ ರೂ

railway
Published on

ಮಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ 2024-25 ರ ಮಧ್ಯಂತರ ಬಜೆಟ್‌ನಲ್ಲಿ ದಕ್ಷಿಣ ರೈಲ್ವೇಯ ಜೋಕಟ್ಟೆ ರೈಲು ನಿಲ್ದಾಣ ಮತ್ತು ಕೊಂಕಣ ರೈಲ್ವೆ ನಿಗಮದ ತೋಕೂರು ರೈಲು ನಿಲ್ದಾಣದ ನಡುವಿನ ಲೈನ್ ಡಬ್ಲಿಂಗ್‌ಗೆ 50 ಕೋಟಿ ರೂ. ಸಹಿತ ಮಂಗಳೂರು ರೈಲ್ವೆ ವಲಯದ ಕಾಮಗಾರಿಗಳಿಗೆ ಒಟ್ಟು 55 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಜೋಕಟ್ಟೆ ಮತ್ತು ತೋಕೂರು ನಡುವಿನ ಅಂತರವು ಕೇವಲ 1.98 ಕಿ.ಮೀ ಆಗಿದ್ದರೂ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆ ಎರಡು ವಲಯಗಳ ಜಾಲಗಳನ್ನು ಸಂಪರ್ಕಿಸುವ ಕೆಲಸವು ನಿರ್ಣಾಯಕವಾಗಿದೆ ಎಂದು ದಕ್ಷಿಣ ರೈಲ್ವೆಯ ನಿರ್ಮಾಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶಾಜಿ ಜಕರಿಯಾ ತಿಳಿಸಿದ್ದಾರೆ.
ಈ ಭಾಗದ ಕಾಮಗಾರಿಯು ಟ್ರ್ಯಾಕ್‌ಗಳನ್ನು ಹಾಕುವ ಭೌತಿಕ ಕೆಲಸಕ್ಕಿಂತ ಹೆಚ್ಚಾಗಿ ಸಿಗ್ನಲಿಂಗ್, ದೂರಸಂಪರ್ಕ ಮತ್ತು ವಿದ್ಯುದ್ದೀಕರಣ ಕಾರ್ಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
ಬಜೆಟ್ನಲ್ಲಿ ಜೋಕಟ್ಟೆ-ತೋಕೂರು ಲೈನ್ ಡಬ್ಲಿಂಗ್‌ಗೆ ಹಣ ಮೀಸಲಿಡುವುದರ ಜತೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ಮಾರ್ಗಗಳನ್ನು ಪೂರ್ಣಗೊಳಿಸಲು 4.74 ಕೋಟಿ ರೂ. ಕಾದಿರಿಸಲಾಗಿದೆ. ಈ ರೈಲು ನಿಲ್ದಾಣದಲ್ಲಿ 4 ಮತ್ತು 5 ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು ಇತ್ತೀಚೆಗೆ ಕಾರ‌್ಯಾರಂಭಿಸಿವೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅತ್ತಾವರ ಕಡೆಯ ಎರಡನೇ ಪ್ರವೇಶದ ಅಭಿವೃದ್ಧಿಗೆ ಈ ಬಾರಿಯೂ ಹೆಚ್ಚಿನ ಬೆಂಬಲ ದೊರೆತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net