ಯುನಿಯನ್ ಬ್ಯಾಂಕ್ ನಿಂದ ಎಂಎಸ್ಎಂಇ ಔಟ್ರೀಚ್ ಕ್ಯಾಂಪ್

Published on

ಹುಬ್ಬಳ್ಳಿ: ಮಧ್ಯಮ ಹಾಗೂ ಸಣ್ಣ ಉದ್ಯಮದಾರರಿಗೆ ಸೌಲಭ್ಯ ತಲುಪಿಸುವ ಸಲುವಾಗಿ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ ವತಿಯಿಂದ ಮಂಗಳವಾರ ನಗರದ ಎಪಿಎಂಸಿಯಲ್ಲಿ ಬೃಹತ್ ಎಂಎಸ್ಎಂಇ ಔಟ್ರೀಚ್ ಶಿಬಿರ ಏರ್ಪಡಿಸಲಾಗಿತ್ತು.

ಸಣ್ಣ ಉದ್ಯಮಗಳಿಗೆ ಇರುವ ಸರ್ಕಾರಿ ಪ್ರಾಯೋಜಿತ ಯೋಜನೆಗಳು, ಹಣಕಾಸಿನ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಅತಿಥಿಯಾಗಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್ಎಂಇ ಪಾತ್ರ ಮುಖ್ಯವಾಗಿದೆ. ಹಾಗಾಗಿ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಅಗತ್ಯವಾಗಿದೆ ಎಂದರು.

ಸ್ವರ್ಣ ಗ್ರುಪ್ ಆಫ್ ಕಂಪನಿಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಎಂಎಸ್ಎಂಇ ಕ್ಷೇತ್ರದಲ್ಲಿ ಸುಸ್ಥಿರತೆ ಹಾಗೂ ಅವಿಷ್ಕಾರಗಳ ಅಗತ್ಯವಿದೆ. ಉದ್ಯಮದ ಬೆಳವಣಿಗೆಗೆ ಆಧುನಿಕ ಆಥಿರ್ಕ ಸಲಕರಣೆಗಳನ್ನು ಬಳಸಿಕೊಳ್ಳಬೇಕು ಎಂದರು.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ಕೆ. ಮಹೇಂದ್ರ ರೆಡ್ಡಿ ಮಾತನಾಡಿ, ಎಂಎಸ್ಎಂಇಗೆ ಬ್ಯಾಂಕ್ ನೀಡುತ್ತಿರುವ ಬೆಂಬಲ, ಸಹಕಾರ ಹಾಗೂ ಸೇವೆಗಳನ್ನು ವಿವರಿಸಿದರು.

ಸರ್ಕಾರಿ ಪ್ರಯೋಜಿತ ಯೋಜನೆಗಳನ್ನು ಶಿಬಿರದಲ್ಲಿ ಪ್ರದರ್ಶಿಸಲಾಯಿತು. ಬ್ಯಾಂಕಿನ ಅಧಿಕಾರಿಗಳು ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಸಂವಾದ ಕೂಡ ನಡೆಸಿದರು.

ಉದ್ಯಮದ ಪರಿಣಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಸೌಲ ಸೌಲಭ್ಯ, ಸಬ್ಸಿಡಿ, ಡಿಜಿಟಲ್ ಬ್ಯಾಂಕಿಂಗ್ ಪರಿಹಾರ ಮುಂತಾದವುಗಳ ಮಾಹಿತಿ ಲಭಿಸಿತು.
ಪ್ರಾದೇಶಿಕ ಮುಖ್ಯಸ್ಥ ಕೆ. ಬೈರೇಗೌಡ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net