ಮೈಸೂರಿನ ರೈತರ ಜಮೀನಿಗೆ ಭೇಟಿ ನೀಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

Union Agriculture Minister Shivraj Singh Chouhan visits farmers' farms in Mysore
Published on

ಮೈಸೂರು: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ತಿ.ನರಸೀಪುರ ತಾಲೂಕಿನ ವರಕೋಡು ಗ್ರಾಮದ ಪ್ರಗತಿಪರ ರೈತ ಶ್ರೀರಾಂ ಅವರ ಜಮೀನಿಗೆ ಭೇಟಿ ನೀಡಿ ಸಮ್ಮಿಶ್ರ ಬೆಳೆ ಪದ್ಧತಿ ಕುರಿತು ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಮಿಶ್ರ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಪ್ರ್ರೋತ್ಸಾಹ ನೀಡಲಾಗುವುದು. ಕಡಿಮೆ ಪ್ರದೇಶದಲ್ಲಿ ಹೆಚ್ಚು ಬೆಳೆ ಬೆಳೆಯಬೇಕಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಸಮಗ್ರ ಕೃಷಿ ಮಾಡಿ ಹೆಚ್ಚು ಲಾಭ ಪಡೆಯಬಹುದು. ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುವ ಜತೆಗೆ ಪಶು ಪಾಲನೆ, ಕುರಿ ಸಾಗಾಣಿಕೆ, ಕೋಳಿ ಸಾಗಾಣಿಕೆ, ಮೀನು ಸಾಕಾಣಿಕೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆ ಕೈಗೊಳ್ಳಬಹುದು. ಮಿಶ್ರ ಬೆಳೆ ಬೆಳೆದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

ದೇಶದ ರೈತರ ಹಿತ ಕಡೆಗಣಿಸಿ ಯಾವುದೇ ದೇಶದೊಂದಿಗೆ ನಾವು ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಮಿಶ್ರ ಬೆಳೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡುವುದರ ಜತೆಗೆ ರೈತರನ್ನು ಲಾಭದಾಯಕ ದತ್ತ ಕೊಂಡೊಯ್ಯಲು ಮುಂದಾಗಿದ್ದೇವೆ ಎಂದರು.

ಬಿಹಾರದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ರ‌್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ತಾಯಿಯನ್ನು ದೇವರ ದೃಷ್ಟಿಯಿಂದ ಪೂಜಿಸುತ್ತೇವೆ. ಪ್ರಧಾನಿ ಅವರ ತಾಯಿಯ ಬಗ್ಗೆ ಹಾವೇಳನಕಾರಿಯಾಗಿ ಮಾತನಾಡಿರುವುದು ದುರ್ದೈವ. ಎಲ್ಲರ ತಾಯಿ ಒಂದೇ, ಯಾರು ಕೂಡ ಬೇರೆಯವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಇದು ನಮ್ಮ ದೇಶದ ಸಂಸ್ಕೃತಿಯಲ್ಲ ಎಂದರು.

ಈ ಸಂದರ್ಭ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net