

ಹುಬ್ಬಳ್ಳಿ: ನಗರದ ಈಶ್ವರಿ ಫೌಂಡೇಷನ್ ವತಿಯಿಂದ ವಿಘ್ನೇಶ್ವರ ಕನ್ನಡ ಕಾನ್ವೆಂಟ್ ಸ್ಕೂಲ್ನಲ್ಲಿ ಶುಕ್ರವಾರ ಬಡ ಹಾಗೂ ಅನಾಥ ಮಕ್ಕಳಿಗೆ ಸಮವಸ್ತ್ರವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ್, 60 ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಅವರಿಗೆ ಉತ್ತಮ ಶಿಕ್ಷಣ ಕೊಟ್ಟಲ್ಲಿ ದೇಶ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳ ಮುಖದಲ್ಲಿ ನಗು ಮೂಡಿದರೆ ಅದೇ ನಮಗೆ ಆಶೀರ್ವಾದ ಎಂದರು.
ಈಶ್ವರಿ ಫೌಂಡೇಷನ್ ವತಿಯಿಂದ ಬಡ ಮಕ್ಕಳಿಗೆ ಸಮವಸ್ತ್ರ, ನೋಟಬುಕ್ ಹಾಗೂ ಶಾಲೆ ಶುಲ್ಕ ಪಾವತಿ ಮಾಡುತ್ತ ಬರಲಾಗಿದೆ. ಇದರ ಜತೆಗೆ ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಬಣ್ಣ ಹಚ್ಚುವ ಕಾರ್ಯ ಮಾಡಿದೆ ಎಂದರು.
ಫೌಂಡೇಷನ್ ಕಾರ್ಯದರ್ಶಿ ವಿಜಯ ಬೈಕರೇಕರ್, ಮಂಜು ವೇರ್ಣೇಕರ್, ಮಹಾದೇವಿ ಗಣಚಾರಿ, ವೆಂಕಟೇಶ ಭಂಡಾರಿ, ಚಂದ್ರು ಶಲವಡಿ, ಬಸವರಾಜ ಎಲಿಶೆಟ್ಟರ್, ಪ್ರಜ್ವಲ್ ಬಳ್ಳಾರಿ, ಗಣೇಶ ದಲಬಂಜನ ಇತರರು ಇದ್ದರು.