ಸಂಕಷ್ಟ ತಂದಿಟ್ಟ ಏಕರೂಪ ಶಾಲಾ ಸಮಯ

(ಸಾದರ್ಭಿಕ ಚಿತ್ರ)
(ಸಾದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ ಎಲ್ಲೆಡೆ ಗೊಂದಲ
  • ತರಗತಿಗಳು ಬೆಳಗ್ಗೆ 8.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:30ಕ್ಕೆ ಮುಕ್ತಾಯ
  • ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲದೆ ಶಿಕ್ಷಕರಿಗೆ ಸಂಕಷ್ಟ
ಮಂಗಳೂರು: ಶಾಲಾ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಶನಿವಾರದ ದಿನದಂದು ಏಕರೂಪದ ಶಾಲಾ ವೇಳಾಪಟ್ಟಿಯನ್ನು ಜಾರಿಗೆ ತಂದಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ತರಗತಿಗಳು ಬೆಳಗ್ಗೆ 8.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:30ಕ್ಕೆ ಮುಕ್ತಾಯಗೊಳ್ಳಬೇಕಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ನಿಯಮ ಜಾರಿಗೆ ಬಂದ ಮೊದಲ ದಿನವೇ ಹಲವು ಗೊಂದಲಗಳು ಕಂಡುಬಂದಿವೆ.
ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿ ಎನ್ನುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಆದರೆ ಈ ಆದೇಶವು ಕರಾವಳಿಯ ಉಭಯ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆಗಳ ದೂರದೂರುಗಳಿಂದ ಬರುವ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲದೆ ಶಿಕ್ಷಕರಿಗೆ ಸಂಕಷ್ಟ ತಂದೊಡ್ಡಿದೆ.

ಅಷ್ಟು ಬೇಗನೆ ಸಾಧ್ಯವಿಲ್ಲ

ಶಾಲೆಯೊಂದರ ಶಿಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿ, ನಾವು ಎಂದಿನಂತೆ ತರಗತಿಗಳನ್ನು ಪ್ರಾರಂಭಿಸಬಹುದೇ ಹೊರತು, ಬೆಳಗ್ಗೆ 8.30ಕ್ಕೆ ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಡ್ಡಾಯ ಆನ್‌ಲೈನ್‌ ಹಾಜರಾತಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪೋಷಕರಿಗೆ ಅನುಕೂಲ ಮಾಡಿಕೊಡಲು ಇಲಾಖೆಯು ಏಕರೂಪದ ಸಮಯವನ್ನು ನಿಗದಿಪಡಿಸಿದ್ದರೂ, ಸ್ಥಳೀಯ ಪ್ರಯಾಣದ ಪರಿಸ್ಥಿತಿಗಳು ಮತ್ತು ಸಮುದಾಯದ ಅಗತ್ಯಗಳಿಗೆ ಅನುಗುಣವಾಗಿ ಸಮಯ ನಿರ್ಧರಿಸುವ ಸ್ವಾತಂತ್ರ್ಯವನ್ನು ಜಿಲ್ಲಾ ಅ˜ಕಾರಿಗಳಿಗೆ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

ಶಿಕ್ಷಕರ ಸಂಘದ ಆಕ್ಷೇಪ

ಪರಿಷ್ಕೃತ ಸಮಯವು ವಿದ್ಯಾರ್ಥಿಗಳಿಗೆ ಅಥವಾ ಶಿಕ್ಷಕರಿಗೆ ಪೂರಕವಾಗಿಲ್ಲ. ಸಾಮಾನ್ಯ ದಿನಗಳಿಗಿಂತ ಶನಿವಾರದಂದು ಒಂದು ಗಂಟೆ ಮುಂಚಿತವಾಗಿ ಶಾಲೆ ಆರಂಭಿಸುವುದು ಧಾರ್ಮಿಕ ಬೋಧನಾ ವೇಳಾಪಟ್ಟಿಗಳು ಹಾಗೂ ಸ್ಥಳೀಯ ವಾಹನ ಸಂಚಾರ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಕನಿಷ್ಠ 9ರಿಂದ 1 ಗಂಟೆ ಇಟ್ಟರೆ ಎಲ್ಲರಿಗೂ ಉತ್ತಮ. ಈ ನಿಯಮವನ್ನು ಸರಕಾರ ಮರುಪರಿಶೀಲಿಸಬೇಕು. ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದವರು ಹೇಳಿದ್ದಾರೆ.

ಮುಂಜಾನೆ ಬಸ್ಸಿನ ಸಮಸ್ಯೆ

ಈ ಹಿಂದೆ ಶನಿವಾರದ ಶಾಲಾ ಸಮಯ 9.45ರಿಂದ ಮಧ್ಯಾಹ್ನ 1.30ರ ವರೆಗೆ ಇತ್ತು. ಹೊಸ ನಿಯಮಕ್ಕೆ ಹಠಾತ್ತನೆ ಹೊಂದಿಕೊಳ್ಳಲಾಗದೆ ಕೆಲವು ಶಾಲೆಗಳು ಹಳೆಯ ಸಮಯದ ಪ್ರಕಾರವೇ ಕಾರ್ಯನಿರ್ವಹಿಸಿದವು. ವಿಶೇಷವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ದೂರದ ಹಳ್ಳಿಗಳಿಂದ ಸಾರ್ವಜನಿಕ ಸಾರಿಗೆಯನ್ನು (ಬಸ್‌) ನೆಚ್ಚಿಕೊಂಡು ಬರಬೇಕಾಗಿದ್ದು, ನಿಗದಿತ ಸಮಯಕ್ಕೆ ಶಾಲೆ ತಲುಪುವುದು ಕಷ್ಟಕರವಾಗುತ್ತದೆ.

ಮುಸ್ಲಿಂ ವಿದ್ಯಾರ್ಥಿಗಳಿಗೆ ಅನ್ಯಾಯ

ಕರಾವಳಿಯ ಉಭಯ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಮಂದಿ ಹೆಚ್ಚಾಗಿದ್ದಾರೆ. ಅವರ ಮಕ್ಕಳು ಧಾರ್ಮಿಕ ಅಭ್ಯಾಸಕ್ಕಾಗಿ ಧರ್ಮಗುರುಗಳ ಮದರಸ ಶಿಕ್ಷಣಕ್ಕೆ ತೆರಳುತ್ತಾರೆ. ಆ ಮಕ್ಕಳಿಗೆ ಬೆಳಗ್ಗೆ 8.30ರ ವರೆಗೆ ಮದರಸಾ ತರಗತಿ ಇರುತ್ತದೆ. ಹಾಗಾಗಿ ಹೊಸ ನಿಯಮದಂತೆ 8.30ಕ್ಕೇ ಶಾಲೆಯನ್ನು ತಲುಪಲು ಅವರಿಗೆ ಸಮಯದ ಅಭಾವ ಎದುರಾಗುತ್ತದೆ.

ಸರಕಾರದ ನಿಯಮವನ್ನು ನಾವು ಪ್ರಶ್ನಿಸುವಂತಿಲ್ಲ. ಪಾಲನೆ ಮಾಡಲೇಬೇಕು. ಅದರಂತೆ ಎಲ್ಲ ಶಾಲೆಗಳಿಗೆ ಬಿಇಒಗಳ ಮೂಲಕ ಸೂಚನೆ ರವಾನಿಸಿದ್ದೇವೆ. ಈ ಹಿಂದೆ ಬೆಳಗ್ಗೆ 9.45ಕ್ಕೆ ಶಾಲೆ ಪ್ರಾರಂಭವಾಗುತ್ತಿತ್ತು. ಈಗಿನ ಆದೇಶದಂತೆ 8.30ಕ್ಕೆ ತರಗತಿ ಪ್ರಾರಂಭಿಸಬೇಕು. ಕರಾವಳಿಯು ಪ್ರಾದೇಶಿಕ ಹಾಗೂ ಭೌಗೋಳಿಕವಾಗಿ ಭಿನ್ನವಾಗಿದೆ. ಕೆಲವು ಗ್ರಾಮೀಣ ಭಾಗಗಳಿಗೆ ಅಷ್ಟು ಬೇಗ ಸಾರಿಗೆ ವ್ಯವಸ್ಥೆಯೂ ಲಭಿಸುವುದಿಲ್ಲ. ಎಲ್ಲವೂ ನಮ್ಮ ಗಮನದಲ್ಲಿ ಇದೆ. ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗಿದೆ.

— ಜಿ. ಶಶಿಧರ್‌, ಡಿಡಿಪಿಐ, ದ.ಕ. ಜಿಲ್ಲೆ

ಗ್ರಾಮೀಣ ಭಾಗದ ಶಾಲೆಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರು ದೂರದ ಸ್ಥಳಗಳಿಂದ ಪ್ರಯಾಣಿಸಬೇಕಾಗುವುದರಿಂದ, ಅವರಿಗೆ ಮತ್ತು ಗ್ರಾಮೀಣ ಭಾಗದಿಂದ ನಗರಗಳಿಗೆ ಬಸ್ಸುಗಳಲ್ಲಿ ಬರುವ ಮಕ್ಕಳಿಗೆ ಬಹಳಷ್ಟು ತೊಂದರೆ ಎದುರಾಗುತ್ತದೆ. ಬೆಳಗ್ಗೆ 8.30ರ ಒಳಗೆ ಶಾಲೆಗೆ ಹಾಜರಾಗುವುದು ದೊಡ್ಡ ಸವಾಲಾಗಿದೆ.

— ಉಡುಪಿ ಮತ್ತು ದ.ಕ. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net