

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಎಲ್ಲ ಅಧ್ಯಯನ ವಿಭಾಗಗಳಲ್ಲಿ ಒಂದೇ ಪರೀಕ್ಷೆ ವಿಧಾನ ಜಾರಿಗೊಳಿಸಲು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿತೀರ್ಮಾನಿಸಲಾಯಿತು.
ವಿವಿಯ ಕ್ರಾಫರ್ಡ್ ಭವನದಲ್ಲಿ ಬುಧವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧಕ್ಷತೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಮಂಡಳಿ 2ನೇ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಅಂತಿಮವಾಗಿ ಎಂಕಾಂ ಫೈನಾನ್ಶಿಯಲ್ ಸರ್ವೀಸ್ ಹೊರತುಪಡಿಸಿ ಉಳಿದೆಲ್ಲ ಅಧ್ಯಯನ ವಿಭಾಗಗಳಲ್ಲಿ ಸಿಬಿಸಿಎಸ್ ಪದ್ಧತಿ ಅಳವಡಿಕೆಗೆ ನಿರ್ಣಯಿಸಲಾಯಿತು.
ಪ್ರಸ್ತುತ ವಿವಿಯಲ್ಲಿ ಫ್ಲೆಕ್ಸಿಬಲ್ ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಮ್ (ಎಫ್‌ಸಿಬಿಸಿಎಸ್) ಜಾರಿಯಲ್ಲಿರುವ ಗಣಕ ವಿಜ್ಞಾನ ಅಧ್ಯಯನ ವಿಭಾಗ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ, ವಾಣಿಜ್ಯಶಾಸ್ತ್ರ , ಭೌತಶಾಸ್ತ್ರ ಮತ್ತು ಜೆನೆಟಿಕ್ಸ್ ಆ್ಯಂಡ್ ಜೆನೋಮಿಕ್ಸ್ ಅಧ್ಯಯನ ವಿಭಾಗವನ್ನು ಸಿಬಿಸಿಎಸ್‌ಗೆ ಬದಲಿಸಿ ಏಕರೂಪದ ಪರೀಕ್ಷೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಆದರೆ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗವನ್ನು ಬದಲಿಸಲು ಆಕ್ಷೇಪ ವ್ಯಕ್ತವಾಯಿತು. ನಾವು ಎಫ್‌ಸಿಬಿಸಿಎಸ್ ಮಾದರಿಯಲ್ಲಿಯೇ ಪಾಠಪ್ರವಚನ ನಡೆಸುತ್ತೇವೆ. ಆದರೆ ಪರೀಕ್ಷೆಯನ್ನು ಬೇಕಿದ್ದರೆ ಕೇಂದ್ರೀಕೃತಗೊಳಿಸಿ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಇತರ ಸದಸ್ಯರು ಏಕರೂಪ ವ್ಯವಸ್ಥೆಗೆ ವಿಶ್ವವಿದ್ಯಾಲಯ ತೀರ್ಮಾನಿಸಿರುವುದರಿಂದ ತಾವೂ ಸಿಬಿಸಿಎಸ್ ಮಾದರಿಯನ್ನೇ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ನಾಗರಾಜ್ ಅವರು ಮಧ್ಯಪ್ರವೇಶ ಮಾಡಿ, ಆ ವಿಭಾಗದಲ್ಲಿ ಕಾರ್ಪೋರೇಟ್ ಕ್ಷೇತ್ರ ಕುರಿತು ಪಠ್ಯಗಳು ಇವೆ. ಆದ್ದರಿಂದ ಎಂಕಾಂ ಫೈನಾನ್ಶಿಯಲ್ ಸರ್ವೀಸ್ ವಿಭಾಗದಲ್ಲಿ ಎಫ್‌ಸಿಬಿಸಿಎಸ್ ಪದ್ಧತಿ ಇರಲಿ ಎನ್ನುವ ಸಲಹೆ ನೀಡಿದರು.
ಚರ್ಚೆಯ ನಂತರ ಎಂಕಾಂ ಫೈನಾನ್ಶಿಯಲ್ ಸರ್ವೀಸ್ ಹೊರತುಪಡಿಸಿ ಉಳಿದೆಲ್ಲಾ ವಿಭಾಗಕ್ಕೂ ಸಿಬಿಸಿಎಸ್ ಪದ್ಧತಿ ಅಳವಡಿಸಲು ತೀರ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಈಗ ಅನುದಾನದ ಕೊರತೆ ಎದುರಿಸುತ್ತಿದ್ದರು ಪಿಂಚಣಿ ನೀಡಲು ಅನುದಾನ ಇಲ್ಲ. ಹಾಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಪಿಂಚಣಿ ನೀಡಲು ಹಣವಿಲ್ಲ
ಈವರೆಗೆ ಮೈಸೂರು ವಿವಿಯ ಪಿಂಚಿಣಿದಾರರಿಗೆ 280 ಕೋಟಿ ರೂ. ಎಲ್‌ಐಸಿ ಹಣದಿಂದ ಪಾವತಿ ಮಾಡಲಾಗುತ್ತಿತ್ತು. ಈಗ ಆ ಹಣವೂ ಮುಕ್ತಾಯವಾಗಿದೆ. ಅಲ್ಲದೇ ವಿವಿಯ ಇತರ ಮೂಲಗಳಿಂದ ಬರುವ ಹಣ ವಿವಿಯ ನಿರ್ವಹಣೆಗೆ ಸಾಕಾಗುತ್ತಿದೆ. ಹೀಗಾಗಿ, ಪಿಂಚಣಿ ನೀಡಲು ವಿವಿಯಲ್ಲಿ ಹಣವೇ ಇಲ್ಲದಂತಾಗಿದೆ ಎಂದು ಹಣಕಾಸು ಅಧಿಕಾರಿ ರೇಖಾ ಸಭೆಗೆ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ಮಾತನಾಡಿ, ಮೈಸೂರು ವಿವಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವವರಿಗೆ ಪಿಂಚಣಿ ನೀಡುವುದು ಮುಖ್ಯವಾಗಿದೆ. ಇಳಿವಯಸ್ಸಿನಲ್ಲಿ ನಾನಾ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಔಷಧ ಸೇರಿದಂತೆ ಇನ್ನಿತರ ಅಗತ್ಯ ಖರ್ಚುಗಳ ನಿರ್ವಹಣೆಗೆ ಹಣ ಬೇಕಾಗುತ್ತದೆ. ಹಾಗಾಗಿ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮವಹಿಸಲು ಮನವಿ ಮಾಡುತ್ತೇನೆ. ನೀವು ಕೂಡ ವಿವಿ ವತಿಯಿಂದ ಪತ್ರವನ್ನು ಬರೆಯಿರಿ ಎಂದರು.
ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಪ್ರತಿಕ್ರಿಯಿಸಿ, ವರ್ಷಕ್ಕೆ 1900 ಪಿಂಚಣಿದಾರರಿಗೆ ತಿಂಗಳಿಗೆ 9.5 ಕೋಟಿ ರೂ. ಬೇಕಾಗುತ್ತದೆ. ಈ ಸಾಲಿಗೆ ವಿವಿ ಅಭಿವೃದ್ಧಿಗೆ 157 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ 50 ಕೋಟಿ ರೂ. ನೀಡಿದೆ. ಇದನ್ನೂ ಹಂತ-ಹಂತದಲ್ಲಿ ಬಿಡುಗಡೆ ಮಾಡುತ್ತಿದೆ ಎಂದರು.
ಈಗಾಗಲೇ ಮೂರು ಕಂತು ದೊರೆತಿದ್ದು 4ನೇ ಕಂತಿನ ಹಣ ಡಿಸೆಂಬರ್‌ಗೆ ಬರಲಿದೆ. ಹಾಗಾಗಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಸಾಧ್ಯವಾಗದಂತಾಗಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸಂಶೋಧಕ ವಿದ್ಯಾರ್ಥಿಗಳಿಗೆ ಗಡುವು
ಫೆಲೋಶಿಪ್ ಪಡೆದುಕೊಂಡು ಐದು ವರ್ಷವಾದರೂ ಪಿಎಚ್.ಡಿ ಸಂಶೋಧನಾ ಪ್ರಬಂಧವನ್ನು ಮಂಡಿಸದೆ ಇರುವ ಸಂಶೋಧನಾ ವಿದ್ಯಾರ್ಥಿಗಳು ಡಿಸೆಂಬರ್ 31ರೊಳಗೆ ಪ್ರಬಂಧ ಮಂಡಿಸದಿದ್ದರೆ ಅವರ ನೋಂದಣಿ ರದ್ದುಗೊಳಿಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
ವಿಶ್ವವಿದ್ಯಾಲಯದಲ್ಲಿ ನಾನಾ ವಿಭಾಗಗಳಲ್ಲಿ 1164 ಜನ ಪಿಎಚ್.ಡಿ ಮಾಡುತ್ತಿದ್ದಾರೆ. ಇವರಲ್ಲಿ 69 ಜನರು ಸಂಶೋಧನೆ ಆರಂಭಿಸಿ ಐದು ವರ್ಷ ಕಳೆದರೂ ಇಂದಿಗೂ ಪ್ರಬಂಧ ಮಂಡಿಸದೇ ದೂರ ಉಳಿದಿದ್ದಾರೆ. ಇವರೆಲ್ಲರಿಗೂ ಡಿಸೆಂಬರ್ 31 ರೊಳಗೆ ಪ್ರಬಂಧ ಸಲ್ಲಿಸುವಂತೆ ಗಡುವು ನೀಡಲು ಪರೀಕ್ಷಾಂಗ ಕುಲಸಚಿವ ನಾಗರಾಜು ಈ ವಿಚಾರವನ್ನು ಸಭೆಗೆ ಮಂಡಿಸಿದರು.
ಫೆಲೋಶಿಪ್ ಪಡೆದ ವಿದ್ಯಾರ್ಥಿಗಳು ಸಂಶೋಧನೆ ಕಾರ್ಯವನ್ನು ಪೂರ್ಣಗೊಳಿಸದೆ ಇರುವುದರಿಂದ ಅವರಿಗಾಗಿ ನೀಡಲಾದ ಹಣ ವ್ಯರ್ಥವಾಗುತ್ತದೆ. ಗೈಡ್‌ಗಳೂ ಬಿಗಿಯಾಗಿರಬೇಕು. ಅವರು ವಾರ್ಷಿಕವಾಗಿ ಸಲ್ಲಿಸಿದ ವರದಿಯ ಮೇಲೆ ತೃಪ್ತಿಕರವಾಗಿದೆ ಎಂದು ಬರೆಯದೆ ಆಗಬೇಕಾದ ಕೆಲಸದ ಬಗ್ಗೆ ನಮೂದಿಸಬೇಕು. ಅಲ್ಲದೆ ಸದ್ಯ 69 ವಿದ್ಯಾರ್ಥಿಗಳೂ ಡಿಸೆಂಬರ್ ಒಳಗೆ ಪ್ರಬಂಧ ಮಂಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಆರು ತಿಂಗಳಿಗೊಮ್ಮೆ ಪಿಎಚ್.ಡಿ ಸಂಶೋಧಕರನ್ನು ಆಯಾ ವಿಭಾಗಗಳಲ್ಲಿ ಆಂತರಿಕ ಮೌಲ್ಯ ಮಾಪನ ಮಾಡಬೇಕು. ಆಗ ಅವರು ಯಾವ ಹಂತದಲ್ಲಿದ್ದಾರೆ ಎಂದು ತಿಳಿದು ಅಗತ್ಯ ಮಾರ್ಗದರ್ಶನ ನೀಡಿ ಆದಷ್ಟು ಬೇಗ ಪಿಎಚ್.ಡಿ ಪೂರ್ಣಗೊಳಿಸಬಹುದು. ಆಗ ಬೇರೆಯವರಿಗೂ ಗೈಡ್‌ಶಿಪ್ ಬೇಗ ದೊರೆಯುತ್ತದೆ ಎನ್ನುವ ಸಲಹೆಯೂ ಸಭೆಯಲ್ಲಿ ಕೇಳಿಬಂತು.
ವಾಣಿಜ್ಯ ನಿಕಾಯದ ವಿಶೇಷ ಕಾರ್ಯಕ್ರಮಗಳ ಅಧ್ಯಯನ ಮಂಡಳಿಯ ಶಿಫಾರಸುಗಳಿಗೆ ವಿದ್ಯಾವಿಷಯಕ ಪರಿಷತ್ ಸಭೆಯ ಅನುಮೋದನೆ ನೀಡಲಾಯಿತು. ಮೈಸೂರು ವಿವಿ 2024-25ನೇ ಸಾಲಿನ ವಾರ್ಷಿಕ ವರದಿಯ ಪರಿಶೀಲನೆ ಹಾಗೂ ಅನುಮೋದನೆ, 2024- 25ನೇ ಸಾಲಿನ ವಿವಿಯ ವಾರ್ಷಿಕ ಲೆಕ್ಕ ಪತ್ರಗಳು, 2022-23ನೇ ಸಾಲಿನ ವಿವಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಣೆಗಳಿಗೆ ಅನುಪಾಲನ ವರದಿಗೆ ಅನುಮೋದನೆ ನೀಡಲಾಯಿತು.
ಕೆ.ವಿವೇಕಾನಂದರಿಂದ ದತ್ತಿ ಸ್ಥಾಪನೆ
ವಿಧಾನಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ತಮ್ಮ ತಂದೆ ಕರೀಗೌಡ ಹಾಗೂ ತಾಯಿ ಚಿಕ್ಕತಾಯಮ್ಮ ಚಿನ್ನದ ಪದಕ ದತ್ತಿ ಸ್ಥಾಪಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಎರಡನೇ ಸ್ಥಾನ ಪಡೆದವರಿಗೆ ಈ ಚಿನ್ನದ ಪದಕ ನೀಡಲು ಅವರು ತೀರ್ಮಾನಿಸಿದ್ದಾರೆ. ಇದಕ್ಕಾಗಿ 2 ಲಕ್ಷ ರೂ.ಚೆಕ್ ಅನ್ನು ವಿವಿಗೆ ಹಸ್ತಾಂತರಿಸಿದರು.
ಒಂದು ಜಿಲ್ಲೆಗೆ ಸೀಮಿತವಾದ ಬಳಿಕ ಈ ಬಾರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರವೇಶಾತಿ ತೃಪ್ತಿಕರವಾಗಿಲ್ಲ. ಕ್ಯಾಂಪಸ್‌ನ ರಸ್ತೆ ಅಭಿವೃದ್ಧಿಗೂ ನಾವೇ ಅನುದಾನ ಒದಗಿಸಿಕೊಳ್ಳಬೇಕು. ವಿವಿ ಈಗ ಒಂದು ಜಿಲ್ಲೆಗೆ ಸೀಮಿತವಾದರೂ ಜಾಗ ಮತ್ತು ಕಟ್ಟಡಗಳು ಅಷ್ಟೇ ಇವೆ. ಇವುಗಳ ನಿರ್ವಹಣೆಯನ್ನೂ ಕೂಡ ನಮಗೆ ದೊರಕುವ ಆದಾಯದಲ್ಲೇ ಮಾಡಬೇಕು.
ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ