

ಮುದ್ದೇಬಿಹಾಳ: ದೇಶದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಬಡವರಿಗೊಂಡು, ಶ್ರೀಮಂತರಿಗೊಂದು ರೀತಿಯ ಶಿಕ್ಷಣ ವ್ಯವಸ್ಥೆ ಸಮಾಜದ ಪ್ರಗತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಮಹಾಂತೇಶ ನಗರದಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ವಾಲ್ಮೀಕಿ ಸಮಾಜ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಪ್ರೀಂಕೋರ್ಟ್ ಮೀಸಲಾತಿ ಬಗ್ಗೆ ವಿಶೇಷ ಆದೇಶ ಹೊರಡಿಸಿದೆ. ಈಗಾಗಲೇ ಮೀಸಲಾತಿ ಪಡೆದು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಸಬಲರಾದವರು ಮತ್ತೆ ಮೀಸಲಾತಿಗೆ ಒಳಪಡದೆ ಅವರದೇ ಸಮಾಜದ ಬಡವರಿಗೆ ಅವಕಾಶ ನೀಡಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ ನಾಟಿಕಾರ ಮಾತನಾಡಿದರು. ಎಂಜಿಎಂಕೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯ ಶಿವು ಶಿವಪುರ, ತಾಪಂ ಇಒ ನಿಂಗಪ್ಪ ಮಸಳಿ, ಪಿಎಸ್‌ಐ ಸಂಜಯ ತಿಪ್ಪರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಡಿಎಸ್‌ಎಸ್ ಮುಖಂಡರಾದ ಡಿ.ಬಿ.ಮುದೂರ, ತಿಪ್ಪಣ್ಣ ದೊಡಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಟಿ.ವಿ.ಮಂಟೂರ, ಅಶೋಕ ಪಾದಗಟ್ಟಿ, ಹಣಮಂತ ನಾಯಕಮಕ್ಕಳ, ರಾಮು ಪೂಜಾರಿ, ಬಲಭೀಮ ನಾಯಕಮಕ್ಕಳ, ಹುಲಗಪ್ಪ ನಾಯಕಮಕ್ಕಳ, ನಿಂಗಪ್ಪ ಇಂಗಳಗೇರಿ, ರಾಮಣ್ಣ ರಾಜನಾಳ, ಪ್ರಧಾನಿ ವಾಲಿಕಾರ, ಸಿದ್ದು ತಳ್ಳಳ್ಳಿ, ರಾಮು ದಳವಾಯಿ, ಶಿವು ಕನ್ನೊಳ್ಳಿ ಇತರರಿದ್ದರು.
ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಇತರರನ್ನು ಸನ್ಮಾನಿಸಲಾಯಿತು. ಸಂಗಮೇಶ ಶಿವಣಗಿ ಸಂಗೀತ ಬಳಗದವರು ಪ್ರಾರ್ಥಿಸಿ ನಾಡಗೀತೆಗೆ ಧ್ವನಿಯಾದರು. ಬಿಇಒ ಬಿ.ಎಸ್.ಸಾವಳಗಿ ಸಂವಿಧಾನ ಪೀಠಿಕೆ ಬೋಧಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ನಮನ ಸಲ್ಲಿಸಲಾಯಿತು. ಅಲ್ಲಿಂದ ವಾಲ್ಮೀಕಿ ವೃತ್ತದವರೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಪೂಜಿಸಿ ಜಯಂತಿ ಆಚರಿಸಲಾಯಿತು.