ಏಕರೂಪ ಶಿಕ್ಷಣ ನೀತಿ ಜಾರಿಗೆ ಚಿಂತನೆ

karantha
Published on

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ಕೊಡುವುದು ಅಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಬೇಕಿದೆ. ರಾಜ್ಯದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮ ಹೀಗೆ ಅನೇಕ ವಿಧಗಳಲ್ಲಿ ಬೋಧನೆ ನಡೆಯುತ್ತಿದ್ದು, ಆಧುನಿಕ ವರ್ಣಾಶ್ರಮವಾಗಿದೆ. ಈ ನಿಟ್ಟಿನಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಈ ಹಿಂದಿನ ಸರ್ಕಾರ ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುತ್ತೇವೆಂಬ ಕಾಯ್ದೆ ಜಾರಿಗೊಳಿಸಿತ್ತು. ಆದರೆ ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುವುದು ಪೋಷಕರ ಇಚ್ಛೆ ಎಂಬುದಾಗಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ಪ್ರಭಾಕರ ಪೂಜಾರಿ, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.

ಇನ್ನೂ 1 ಸಾವಿರ ಇಂಗ್ಲಿಷ್ ಶಾಲೆ: ಮಕ್ಕಳ ಸಂಖ್ಯೆಯನ್ನು ಸರಿದೂಗಿಸುವ ನಿಟ್ಟಿನಿಂದ ರಾಜ್ಯಾದ್ಯಂತ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದ್ದೇವೆ. ಆದರೆ ಇತ್ತೀಚೆಗೆ ಕೆಲವು ಕನ್ನಡ ಪರ ಚಿಂತಕರು ಸಿಎಂ ಅವರನ್ನು ಭೇಟಿ ಮಾಡಿ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮುಚ್ಚಿ, ಕನ್ನಡ ಮಾಧ್ಯಮವನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ತಾಕೀತು ಮಾಡಿದ್ದಾರೆ. ಕನ್ನಡ ಶಾಲೆಗಳನ್ನು ಮುಂದುವರಿಸಿದರೆ, ಹಾಜರಾತಿಯ ಕೊರತೆ ಎದುರಾಗುತ್ತದೆ. ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ವಿವಾದ ಆಗುವ ಆತಂಕ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಮುಂದಿನ ದಿನಗಳಲ್ಲಿ ಒಂದು ಸಾವಿರ ಇಂಗ್ಲಿಷ್ ಶಾಲೆ ಆರಂಭಿಸುವ ಉದ್ದೇಶ ಇದೆ. ಆದರೆ ಅದನ್ನು ಯಾವ ರೀತಿ ಮಾಡಬೇಕೆಂಬುವುದನ್ನು ಯೋಚಿಸುತ್ತಿದ್ದೇವೆ. ಅನುಷ್ಠಾನದ ವೇಳೆ ಸ್ವಲ್ಪ ಹೆಚ್ಚುಕಮ್ಮಿಯಾದರೂ ಮೊದಲು ಆರಂಭಿಸಿರುವ ಒಂದು ಸಾವಿರ ಇಂಗ್ಲಿಷ್ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರಬಹುದು. ಆದ್ದರಿಂದ ಕನ್ನಡ ಶಾಲೆಯ ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಶಿಕ್ಷಕರಿಗೂ ಮೊಬೈಲ್ ನಿಷೇಧ: ವಿದ್ಯಾರ್ಥಿಯೊಬ್ಬನ ಪಕ್ಕೆಲುಬು ಪದ ಉಚ್ಚಾರ ಬಗ್ಗೆ ಕೋಟ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ರೀತಿಯ ಘಟನೆ ಇನ್ನು ಮುಂದೆ ಸಂಭವಿಸಬಾರದು ಎಂಬ ಆಶಯದಿಂದ ಶಿಕ್ಷಕರು ಶಾಲೆಯೊಳಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗುವುದು. ಶಿಕ್ಷಕರು ತಾಯಿ ಹೃದಯವಂತರಾಗಬೇಕೇ ವಿನಃ ಬೇರಾವುದು ಆಗಬಾರದು. ಮಕ್ಕಳ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಅಕ್ಷಮ್ಯ ಅಪರಾಧ ಎಂದರು.

ವಿದ್ಯಾರ್ಥಿಗಳೇ ಉದ್ಘಾಟಿಸಿದರು!: ಕೋಟ ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಶಾಲಾ ಹಬ್ಬ ಹಾಗೂ ಪ್ರಾಥಮಿಕ ಶಾಲಾ ನೂತನ ಕಟ್ಟಡದ ಉದ್ಘಾಟನೆ, ಅಮೃತ ಪಥ ಉದ್ಘಾಟನಾ ಸಭೆಯನ್ನು ಸೋಮವಾರ ಆಯೋಜಿಸಲಾಗಿತ್ತು. ಶಾಲಾ ಕಟ್ಟಡವನ್ನು ಸಚಿವರು ಉದ್ಘಾಟಿಸಬೇಕಿತ್ತು. ಆದರೆ ಸಚಿವರು ಶಾಲೆಯ ವಿದ್ಯಾರ್ಥಿಗಳ ಕೈಯಿಂದಲೇ ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ, ತರಗತಿ ಕೋಣೆ, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು.

ಏನೇನಂದ್ರು ಸಚಿವರು?:
- ತಿಂಗಳಲ್ಲಿ ಎರಡು ದಿನ ನೋ ಬ್ಯಾಗ್ ಡೇ
- ಶಾಲಾ ಬ್ಯಾಗ್‌ಗಳ ತೂಕ ಕಡಿಮೆ ಮಾಡುವ ಉದ್ದೇಶ
- ಶಾಲೆ ಸಮಸ್ಯೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್
- ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಳ್ಳಲು ಮಾರ್ಚ್ 31ರಂದು ಸಹಾಯವಾಣಿ
- ಕೋಟ ಭಾಗದಲ್ಲಿ ಪಬ್ಲಿಕ್ ಸ್ಕೂಲ್ ಆರಂಭಕ್ಕೆ ಆದ್ಯತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net