ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

mng-28oct-press club
Published on



ಮಂಗಳೂರು : ಗ್ರಾಮೀಣ ಭಾಗದಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಸಹಿತ ಅಗತ್ಯವಾದ ಪೂರಕ ಅವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಎಂಸಿಎಫ್‌ನ ಸಿಎಸ್‌ಆರ್ ನಿಧಿಯಿಂದ ಒದಗಿಸಲಾಗಿರುವ ಒಂದು ಲಕ್ಷ ರೂ. ಮೌಲ್ಯದ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ‘ ದ.ಕ. ಜಿಲ್ಲೆಯ ಪತ್ರಕರ್ತರು ತಮ್ಮ ಕರ್ತವ್ಯದ ಜತೆಗೆ ಸಾಮಾಜಿಕ ಜವಾಬ್ಧಾರಿಯನ್ನು ನಿರ್ವಹಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ’ಎಂದರು.
ಪತ್ರಕರ್ತರ ಸಂಘದವರು ಕುತ್ಲೂರು ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಕಳೆದ 5 ವರ್ಷಗಳಿಂದ ಶಾಲೆಯ ಜತೆಗೆ ನಿರಂತರ ಸಂಪರ್ಕ ಇರಿಸಿಕೊಂಡು ಆ ಶಾಲೆ ಹಾಗೂ ಗ್ರಾಮಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾಹಸ ಪ್ರವಾಸೋದ್ಯಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರವಾಗಿರುವ ಕುತ್ಲೂರು ಗ್ರಾಮದ ಪ್ರತಿನಿಧಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ್‌ಕುಮಾರ್, ಎಂಸಿಎಫ್‌ನ ಚೀಫ್ ಪ್ರೊಡಕ್ಷನ್ ಅಧಿಕಾರಿ ಗಿರೀಶ್ ಎಸ್., ಸಾರ್ವಜನಿಕ ಸಂಪರ್ಕ ಅಧಿಕಾರಿ ಅವಿನಂದನ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕುತ್ಲೂರು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net