ಏಕರೂಪ ನಾಗರಿಕ ಸಂಹಿತೆ ಡಾ.ಅಂಬೇಡ್ಕರ್ ಕನಸಿನ ಕೂಸು

ramesh jigajinagi
Published on

ವಿಜಯಪುರ: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕೆಂಬುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯವಾಗಿತ್ತೆಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಧರ್ಮ, ಜಾತಿ, ಪಂಥ, ಲೈಂಗಿಕ ದೃಷ್ಠಿಕೋನ ಮತ್ತು ಲಿಂಗ ಪರಿಗಣಸಿದೇ ರಾಷ್ಟ್ರದ ಎಲ್ಲ ನಾಗರಿಕರಿಗೂ ಸಮಾನವಾಗಿ ಅನ್ವಯಿಸುವ ಕಾನೂನು ಜಾರಿಗೊಳಿಸುವ ಗುರಿ ಮತ್ತು ಉದ್ದೇಶ ಹೊಂದಿರುವ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ ವಿಚಾರ ಇಂದು ನಿನ್ನೆಯದಲ್ಲ. ಜವಾಹರಲಾಲ ನೆಹರು ಪ್ರಧಾನಿಯಾಗಿದ್ದಾಗಲೇ ಈ ವಿಚಾರ ಪ್ರಸ್ತಾಪವಾಗಿತ್ತು. ಅದಕ್ಕಾಗಿಯೇ ಕಾನೂನು ಸಚಿವರಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಈ ಮಸೂದೆಯ ವಿವರ ಮಂಡಿಸುವ ಉಸ್ತುವಾರಿ ವಹಿಸಿದ್ದರು. ಅಲ್ಲದೇ ಅಂಬೇಡ್ಕರ್ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಅದಕ್ಕಾಗಿ ಅವರು ತೀವ್ರ ಟೀಕೆ ಎದುರಿಸಬೇಕಾಯಿತು. ಮಾತ್ರವಲ್ಲದೇ ರಾಜೀನಾಮೆ ಕೂಡ ನೀಡಬೇಕಾಯಿತೆಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಜವಹಾರಲಾಲ ನೆಹರು ಕಾಲದಿಂದಲೂ ಈ ಸಂಹಿತೆಯನ್ನು ವಿರೋಧಿಸುತ್ತಾ ಬಂದಿದೆ. ಕಾರಣ ಕೆಲವು ಮೂಲಭೂತವಾದಿಗಳ ಕೈಯಲ್ಲಿ ಸಿಲುಕಿರುವ ಕಾಂಗ್ರೆಸ್‌ಗೆ ಮತಬ್ಯಾಂಕ್ ಛಿದ್ರಗೊಳ್ಳುವ ಆತಂಕವಿದೆ. ಹೀಗಾಗಿ ಕೆಲವು ಕೋಮಿನ ಜನರನ್ನು ಓಲೈಸಲು ಏಕರೂಪ ನಾಗರಿಕ ಸಂಹಿತೆ ವಿರೋಧಿಸಿಕೊಂಡೇ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸಂಹಿತೆ ಜಾರಿಗೆ ಮುಂದಾಗಿದ್ದನ್ನು ಸಹಿಸದೇ ಟೀಕೆ ಟಿಪ್ಪಣಿಯಲ್ಲಿ ತೊಡಗಿಸಿಕೊಂಡಿದೆ ಎಂದು ಜಿಗಜಿಣಗಿ ಹರಿಹಾಯ್ದಿದ್ದಾರೆ.

ಒಂದು ರಾಷ್ಟ್ರಕ್ಕೆ ಒಂದೇ ರೀತಿಯ ಕಾನೂನು ಇರಬೇಕು. ಎಲ್ಲರಿಗೂ ಅನ್ವಯವಾಗುವ ಕಾನೂನುಗಳಿರಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕಾನೂನು ಇದ್ದರೆ ದೇಶ ವ್ಯವಸ್ಥಿತವಾಗಿ ಮುನ್ನಡೆಯುವುದಾದರೂ ಹೇಗೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವನ್ನು ದೇಶದ ಎಲ್ಲ ಜನ ಒಪ್ಪಿಕೊಂಡಿದ್ದಾರೆ. ಆದರೆ, ಕೆಲವು ಅಸಹಿಷ್ಣುಗಳು ವಿರೋಧಿಸುತ್ತಿದ್ದಾರೆ. ಸಂವಿಧಾನದಲ್ಲಿಯೇ ಈ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಉಲ್ಲೇಖಿಸಲಾಗಿದೆ. ರಾಜನೀತಿ ನಿರ್ದೇಶಕ ತತ್ವಗಳಲ್ಲೂ ಇದೇ ಅಂಶವಿದೆ. ಅದಾಗ್ಯೂ ಇಂಥ ಮಹತ್ವದ ಕಾಯ್ದೆಗೆ ವಿರೋಧ ಮಾಡುವುದು ಸಂವಿಧಾನಕ್ಕೆ ವಿರೋಧ ಮಾಡಿದಂತೆಯೇ ಸರಿ. ಸಂವಿಧಾನಕ್ಕೆ ವಿರೋಧ ಮಾಡಿದವರು ದೇಶದ್ರೋಹ ಮಾಡಿದಂತೆಯೇ ಸರಿ. ಹೀಗಾಗಿ ದೇಶದ್ರೋಹಿಗಳನ್ನು ಈ ದೇಶದ ಜನ ಸಹಿಸಲು ಸಾಧ್ಯವೇ? ಎಂದವರು ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net